ರಾಜ್ಯ ಇಂದು ಎದುರಿಸುತ್ತಿರುವ ವಿದ್ಯುತ್ ಕ್ಷಾಮಕ್ಕೆ ಕಾಂಗ್ರೆಸ್ ತಪ್ಪು ನೀತಿಗಳೇ ಕಾರಣ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ಚಿತ್ತಾಪುರ ಮೀಸಲು ಕ್ಷೇತ್ರದ ಉಪ ಚುನಾವಣೆ ಅಂಗವಾಗಿ ಬಿಜೆಪಿ ಅಭ್ಯರ್ಥಿ ವಾಲ್ಮೀಕಿ ನಾಯಕ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿ ಕೈಗೊಂಡಿರುವ ತಪ್ಪು ನೀತಿಗಳೇ ಇಂದಿನ ವಿದ್ಯುತ್ ಕೊರತೆಗೆ ಕಾರಣ. ಆದರೂ ಬಿಜೆಪಿ ಸರ್ಕಾರ ಅದನ್ನು ಹೇಳುತ್ತಾ ಕುಳಿತುಕೊಳ್ಳದೆ ಪರಿಸ್ಥಿತಿ ಸುಧಾರಣೆಗೆ ಸಮರ್ಥವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಛತ್ತೀಸ್‌ಗಢದಿಂದ ವಿದ್ಯುತ್ ತರುತ್ತಿದ್ದೇವೆ. ಕೇಂದ್ರದ ಗ್ರಿಡ್‌ನಿಂದಲೂ ವಿದ್ಯುತ್ ತರುವ ಮೂಲಕ ಪರಿಸ್ಥಿತಿ ನಿಭಾಯಿಸುತ್ತಿದ್ದೇವೆ. ನಾವು ವಿದ್ಯುತ್ ಕೊರತೆಯಾಗದಂತೆ ಸಾಕಷ್ಟು ಕೆಲಸ ಮಾಡುತ್ತಿದ್ದೇವೆ. ಆದರೆ ಕಾಂಗ್ರೆಸ್‌ನವರು 40ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆಗೆ ಆಸಕ್ತಿ ತೋರಿಸಿದ್ದರೆ ಈ ದುಸ್ಥಿತಿ ರಾಜ್ಯಕ್ಕೆ ಎದುರಾಗುತ್ತಲೇ ಇರಲಿಲ್ಲ ಎಂದು ಈಶ್ವರಪ್ಪ ಹೇಳಿದರು.
ಕಳೆದ ಒಂದೂವರೆ ವರ್ಷದಲ್ಲಿಯೇ ವಿದ್ಯುತ್ ಪರಿಸ್ಥಿತಿ ಸುಧಾರಣೆಗೆ ಸಾಕಷ್ಟು ಸಾಧನೆ ಮಾಡಿದ್ದೇವೆ. ಮುಂದಿನ 4ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯ ಸ್ವಾವಲಂಬಿಯಾಗುವಂತೆ ಮಾಡುತ್ತೇವೆ ಎಂದರು.