ಬಿಜೆಪಿ ಸರ್ಕಾರದ ವಿರುದ್ಧ ಮತ್ತೊಂದು ಭ್ರಷ್ಟಾಚಾರದ ಆರೋಪ ಹೊರಿಸಿರುವ ಜೆಡಿಎಸ್, ವಿದ್ಯುತ್ ಖರೀದಿಯಲ್ಲಿ ಸುಮಾರು 400ರಿಂದ 500ಕೋಟಿ ರೂ.ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದೆ.
ಈ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದೂ ಜೆಡಿಎಸ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ರೇವಣ್ಣ, ಬಿಜೆಪಿ ಅಧಿಕಾರಕ್ಕೆ ಬಂದು ಒಂದೂ ಕಾಲು ವರ್ಷವಾದರೂ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ. ಇಂಧನ ಇಲಾಖೆಯಲ್ಲಿ ಅಧಿಕಾರಿಗಳ ದರ್ಬಾರು ನಡೆಯುತ್ತಿದೆ.
ಆ ಖಾತೆ ಹೊಣೆ ಹೊತ್ತಿರುವ ಕೆ.ಎಸ್.ಈಶ್ವರಪ್ಪ ಅವರಿಗೆ ವಿದ್ಯುತ್ ಕೊರತೆ ನೀಗಿಸುವ ಬಗೆ ಹೇಗೆಂಬುಂದೇ ಗೊತ್ತಿಲ್ಲ ಎಂದು ಟೀಕಿಸಿದರು.
ತಾವು ಇಂಧನ ಸಚಿವರಾಗಿದ್ದಾಗ ಪ್ರತಿ ಯೂನಿಟ್ ವಿದ್ಯುತ್‌ನ್ನು ಖಾಸಗಿಯವರಿಂದ ಗರಿಷ್ಠ 1.20ರೂ.ಗೆ ಖರೀದಿಸಲಾಗಿತ್ತು. ಆದರೆ, ಪ್ರಸ್ತುತ ಬಿಜೆಪಿ ಸರ್ಕಾರ ಟಾಟಾ, ಜಿಂದಾಲ್, ತಣ್ಣೀರುಬಾವಿ ಸೇರಿದಂತೆ ಹಲವು ಕಂಪೆನಿಗಳಿಂದ ಪ್ರತಿ ಯೂನಿಟ್ ವಿದ್ಯುತ್ತನ್ನು 5ರಿಂದ 10ರೂ.ಗೆ ಖರೀದಿ ಮಾಡುತ್ತಿದೆ. ಹೀಗೆ ಒಂದೂ ಕಾಲು ವರ್ಷದಲ್ಲಿ ಸರ್ಕಾರ 3738 ದಶಲಕ್ಷ ವಿದ್ಯುತ್ ಖರೀದಿ ಮಾಡಿದ್ದು, ಇದಕ್ಕಾಗಿ 2572ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದರು.