ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೆಂಗ್ಳೂರು ಬಂದ್ ತಡೆಯಲು ಯಾರಿಂದ್ಲೂ ಸಾಧ್ಯವಿಲ್ಲ: ವಾಟಾಳ್ (Vatal Nagaraj | BJP | Yeddyurappa | Karnataka | Thiruvalluvar | Sarvajna |)
ಬೆಂಗ್ಳೂರು ಬಂದ್ ತಡೆಯಲು ಯಾರಿಂದ್ಲೂ ಸಾಧ್ಯವಿಲ್ಲ: ವಾಟಾಳ್
ಬೆಂಗಳೂರು, ಶನಿವಾರ, 8 ಆಗಸ್ಟ್ 2009( 18:23 IST )
ತಿರುವಳ್ಳುವರ್ ಪ್ರತಿಮೆ ಅನಾವರಣ ವಿರುದ್ಧ ಭಾನುವಾರ ಕನ್ನಡಪರ ಸಂಘಟನೆಗಳು ಕರೆಕೊಟ್ಟಿದ್ದ ಬೆಂಗಳೂರು ಬಂದ್ ಯಾವುದೇ ಕಾರಣಕ್ಕೂ ನಿಲ್ಲಲ್ಲ ಎಂದು ಅಖಿಲ ಕರ್ನಾಟಕ ಗಡಿ ರಕ್ಷಣಾ ಸಮಿತಿ ಸ್ಪಷ್ಟಪಡಿಸಿದೆ.
ಸಮಿತಿಯ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಸಂಜೆ ಪತ್ರಿಕೆಯೊಂದಿಗೆ ಮಾತನಾಡುತ್ತ, ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮದ ವಿರುದ್ಧ ಬಂದ್ ಆಚರಿಸುವುದು ನಿಶ್ಚಿತ. ಯಾವುದೇ ಶಕ್ತಿಗಳು ಅಡ್ಡಿಪಡಿಸಿದರೂ ಎದೆಗುಂದುವುದಿಲ್ಲ ಎಂದು ಹೇಳಿದರು.
ಪ್ರತಿಮೆ ಅನಾವರಣಕ್ಕೆ ವಿರೋಧ ವ್ಯಕ್ತಪಡಿಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿರುವ ಸರ್ಕಾರದ ಕ್ರಮ ಖಂಡನೀಯ. ಮುಖ್ಯಮಂತ್ರಿ ಯಡಿಯೂರಪ್ಪ ಮಿಲಿಟರಿ ಆಡಳಿತ ನಡೆಸುತ್ತಿದ್ದಾರೆ ಎಂದು ಗುಡುಗಿದರು.
19ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಿರುವಳ್ಳುವರ್ ಪ್ರತಿಮೆ ಏಕಾಏಕಿ ಅನಾವರಣಗೊಳ್ಳಲು ಕಾರಣವೇನು? ಇದರ ಹಿಂದೆ ಯಾರ ಕೈವಾಡವಿದೆ? ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕೆಂದು ವಾಟಾಳ್ ಆಗ್ರಹಿಸಿದರು.
ತಮಿಳು ಸಾಮ್ರಾಜ್ಯ ಮಾಡಲು ಕೆಲವು ಕುತಂತ್ರಗಳು ನಡೆದಿವೆ. ಇದಕ್ಕೆ ಈ ಪ್ರತಿಮೆ ಅನಾವರಣ ದಾರಿಯಾಗಲಿದೆ. ಸರ್ಕಾರ ಈಗಲಾದರೂ ಎಚ್ಚೆತ್ತು ಈ ಕಾರ್ಯಕ್ರಮವನ್ನು ಕೈಬಿಡಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.