ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರತಿಮೆ ಅನಾವರಣ ಹೃದಯಗಳ ಎರಕ: ಸಿಎಂ (Thiruvallur | Statue | Yadyurappa | Sarvajna)
 
NRB
ಹದಿನೆಂಟು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ತಮಿಳು ದಾರ್ಶನಿಕ ತಿರುವಳ್ಳುವರ್ ಅವರ ಪ್ರತಿಮೆ ಅನಾವರಣವು ಬೆಂಗಳೂರಿನಲ್ಲಿ ಭಾನುವಾರ ಸಾಕಾರಗೊಂಡಿದ್ದು, ಸಾವಿರಾರು ಮಂದಿ ತಮಿಳರು ಮತ್ತು ಕನ್ನಡಿಗರು ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.

ಸಕಲ ಸರ್ಕಾರಿ ಶಿಷ್ಟಾಚಾರದೊಂದಿಗೆ ಅದ್ಧೂರಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣದ ಮೂಲಕ ಭಾರತ ಜನನಿಯ ತನುಜಾತೆಯರಾಗಿರುವ ಕನ್ನಡ-ತಮಿಳು ಭಾಷಿಕರ ನಡುವೆ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಹೇಳಿದರು. ತಿರುವಳ್ಳುವರ್ ಹಾಗೂ ಸರ್ವಜ್ಞ ಅವರ ಸಾಧನೆಯನ್ನು ಕೊಂಡಾಡಿದ ಮುಖ್ಯಮಂತ್ರಿಗಳು "ಕರ್ನಾಟಕ ಶರಣ-ಸಂತರ ಸಂಸ್ಕೃತಿಯುಳ್ಳ ರಾಜ್ಯ, ಈ ಪ್ರತಿಮೆ ಅನಾವರಣದ ಮೂಲಕ ಎರಡೂ ರಾಜ್ಯಗಳ ಬಾಂಧವ್ಯ ವೃದ್ದಿಯಾಗಲಿದೆ. ಈ ಪ್ರತಿಮೆ ಜನರ ಬಾಂಧವ್ಯದ ಬೆಸುಗೆ, ಇದು ಎರಡು ಹೃದಯಗಳ ಎರಕ'' ಎಂದು ಹೇಳಿದರು.

ಭಾಷೆ, ಪ್ರಾಂತ್ಯದ ಮಿತಿಗಳನ್ನು ಮೀರಿ ಬೆಳೆದ ದಾರ್ಶನಿಕ ತಿರುವಳ್ಳುವರ್ ಅವರ ಕೃತಿ ತಿರುಕ್ಕುರಳ್ ವೇದ ಉಪನಿಷತ್ತಿಗೆ ಸಮ. ಮಾನವೀಯ ಮೌಲ್ಯ ಮತ್ತು ಆದರ್ಶಗಳನ್ನು ಎಲ್ಲಾ ಕಾಲಕ್ಕೂ ಒಗ್ಗುವಂತೆ ಬರೆದ ಹೆಗ್ಗಳಿಕೆ ಅವರ 1300 ತ್ರಿಪದಿಗಳಲ್ಲಿ ಅಡಗಿದೆ. ತಿರುವಳ್ಳುವರ್ ಬರೆದ ತ್ರಿಪದಿಗಳು ದೇಶ ಭಾಷೆಯ ಗಡಿಯನ್ನು ಮೀರಿದ್ದಾಗಿದೆ ಎಂದು ವಿವರಿಸಿದರು. ಇದು ಕೇವಲ ಪ್ರತಿಮೆಗಳ ಅನಾವರಣವಲ್ಲ, ತಮಿಳುನಾಡು ಮತ್ತು ಕರ್ನಾಟಕದ ನಡುವಣ ಸುಮಧುರ ಬಾಂಧವ್ಯಕ್ಕೆ ಬರೆದ ಭಾಷ್ಯ ಎಂದು ಯಡಿಯೂರಪ್ಪ ತಮ್ಮ ಭಾಷಣದಲ್ಲಿ ನುಡಿದರು.
NRB


ಇದೇ ವೇಳೆ, ಆಗಸ್ಟ್ 13ರಂದು ಚೆನ್ನೈನಲ್ಲಿ ಸರ್ವಜ್ಞ ಮೂರ್ತಿ ಅನಾವರಣ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಾವೆಲ್ಲ ಭಾಗವಹಿಸೋಣ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಕೆಲ ದಿನಗಳ ಹಿಂದೆ ಚೆನ್ನೈನಲ್ಲಿ ಕರುಣಾನಿಧಿಯವರನ್ನು ಭೇಟಿಯಾದ ಸಂದರ್ಭವನ್ನು ನೆನೆಸಿಕೊಂಡರು. "ಮುಂದೆ ಕರುಣಾನಿಧಿಯವರು ಆಗಾಗ ರಾಜ್ಯಕ್ಕೆ ಬರಲಿ. ನಾನೂ ಚೆನೈಗೆ ಹೋಗುತ್ತೇನೆ. ವಿವಿಧ ಅಭಿವೃದ್ದಿ ಕಾರ್ಯದಲ್ಲಿ ಜೊತೆಯಾಗಿ ಸಾಗೋಣ" ಎಂದು ಯಡಿಯೂರಪ್ಪ ಕರೆ ನೀಡಿದರು.

ಅಂತೆಯೇ, ಸರ್ವಜ್ಞಮೂರ್ತಿ ಕೂಡ ತಮ್ಮ ತ್ರಿಪದಿಗಳ ಮೂಲಕ ಮನುಷ್ಯ ವಿವೇಕಕ್ಕೆ ಮುನ್ನುಡಿ ಬರೆದವರು ಎಂದು ಹೇಳಲು ಅವರು ಮರೆಯಲಿಲ್ಲ. ಭಾರತದ ಅನೇಕ ರಾಜ್ಯಗಳಲ್ಲಿ ಗಡಿನಾಡಲ್ಲಿ ಭಿನ್ನಾಭಿಪ್ರಾಯಗಳು ಇವೆ. ಸಾಮರಸ್ಯ ಮತ್ತು ಉದಾತ್ತ ಭಾವನೆಯಿಂದ ಇವೆಲ್ಲ ಪರಿಹಾರಗೊಳ್ಳಬೇಕು. ಈ ದಿಸೆಯಲ್ಲಿ ಪ್ರತಿಮೆಗಳ ಅನಾವರಣ ಮೂಲಕ ತಮಿಳುನಾಡು ಮತ್ತು ಕರ್ನಾಟಕ ಇಡೀ ಭಾರತಕ್ಕೆ ಮಾದರಿ ಎನಿಸಿದೆ. ಸ್ನೇಹ ಮತ್ತು ಹೊಂದಾಣಿಕೆಯ ಬದುಕಿಗೆ ನಾಂದಿ ಹಾಡಿದೆ ಎಂದರವರು.

ಉಭಯ ರಾಜ್ಯಗಳ ಸಾಹಿತಿಗಳು, ಪ್ರತಿಪಕ್ಷಗಳು ಈ ಕಾರ್ಯಕ್ರಮಕ್ಕೆ ಪೂರ್ಣ ಬೆಂಬಲ ನೀಡಿದ್ದಾರೆ ಎಂದ ಅವರು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಯಾವುದೇ ಕುಂದುಕೊರತೆ ಇಲ್ಲದಂತೆ ಆಯೋಜಿಸಿದ ಅಧಿಕಾರಿಗಳನ್ನು ಶ್ಲಾಘಿಸಲು ಅವರು ಮರೆಯಲಿಲ್ಲ.

ಇದೇ ವೇಳೆ ಕನ್ನಡ ಸಂಘಗಳ ಪ್ರತಿಭಟನೆಯ ಬಗ್ಗೆ ಖೇದ ವ್ಯಕ್ತಪಡಿಸಿದ ಅವರು, ಇದು ಅನಪೇಕ್ಷಣೀಯವಾಗಿತ್ತು ಎಂದು ಹೇಳಿದರು. ಬನ್ನಿ ಸಂತಸ ಹಂಚಿಕೊಳ್ಳಿ ಸಹೋದರತ್ವದ ಸವಿ ಹಂಚಿಕೊಳ್ಳಿ ಎಂದು ತಾನು ಕರೆನೀಡಿದ್ದಾಗಿ ಅವರು ಹೇಳಿದರು. ವಿಶಾಲಭಾವವೇ ನೈಜರಾಷ್ಟ್ರಭಕ್ತಿ. ಇದನ್ನು ಭಾಷೆ, ಪ್ರಾಂತ್ಯಕ್ಕೆ ಸೀಮಿತಗೊಳಿಸುವುದು ನಾಗರೀಕತೆಗೆ ಘನತೆಯಲ್ಲ ಎಂದು ವಿಶ್ಲೇಷಿಸಿದರು. ಯಾವುದೇ ಸಮಸ್ಯೆಯನ್ನು ಮಾತುಕತೆಗಳ ಮೂಲಕ ಪರಿಹರಿಸೋಣ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ನುಡಿದರು.

ಕನ್ನಡಿಗರು ಸಹನಶೀಲರು, ಆತಿಥ್ಯಪ್ರಿಯರು, ಸ್ವಾಭಿಮಾನಿಗಳು. ಅವರು ಸಂಕುಚಿತ ಮನೋಭಾವದಿಂದ ವರ್ತಿಸದೆ ಹೃದಯ ವೈಶಾಲ್ಯ ಮೆರೆದವರು. ಹಾಗಾಗಿ ಕರ್ನಾಟಕದ ಹೃದಯವಾದ ಬೆಂಗಳೂರು ವಿಶ್ವವ್ಯಾಪಿ ಹೆಗ್ಗುರುತು ಎಂದು ಪರಿಗಣಿತವಾಗಿದೆ ಎಂದು ಅವರು ನುಡಿದರು.
NRB

ಸನ್ಮಾನ, ಸ್ಮರಣಿಕೆ
ಪ್ರತಿಮೆ ಅನಾವರಣದ ಬಳಿಕ ಕರುಣಾನಿಧಿ ಅವರು ಯಡಿಯೂರಪ್ಪರಿಗೆ ಶಾಲು ಹೊದಿಸಿದರು ಅಲ್ಲದೆ ಕವಿ ತಿರುವಳ್ಳುವರ್ ಅವರ ಮೂರ್ತಿ ಹಾಗೂ ಸ್ಮರಣಿಕೆ ನೀಡಿ ಅಭಿನಂದಿಸಿದರು. ಬಳಿಕ ಯಡಿಯೂರಪ್ಪ ಅವರೂ ಕರುಣಾನಿಧಿಯವರನ್ನು ಶಾಲುಹೊದಿಸಿ ಸನ್ಮಾನಿಸಿದರು. ಸ್ಮರಣಿಕೆ ನೀಡಿ ಗೌರವಿಸಿದರು.

ತಮಿಳು ಸಂಘಟನೆಯಿಂದ ಸನ್ಮಾನ
ಸಮಾರಂಭದಲ್ಲಿ ತಮಿಳು ಸಂಘಟನೆಯ ವತಿಯಿಂದ ಉಭಯ ಮುಖ್ಯಮಂತ್ರಿಗಳಿಗೆ ಮೈಸೂರು ಪೇಟತೊಡಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಅಲ್ಲದೆ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರಿಗೂ ಹೂಗುಚ್ಚ ನೀಡಿದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ