ರಾಜ್ಯಾದ್ಯಂತ ಹಬ್ಬುತ್ತಿರುವ ಮಹಾಮಾರಿ ಸ್ವೈನ್ ಫ್ಲೂವನ್ನು ಎದುರಿಸಲು ರಾಜ್ಯ ಸರ್ವಸನ್ನದ್ಧವಾಗಿದೆ ಎಂಬುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ರಾಜ್ಯದಲ್ಲಿ ಭಾನುವಾರಕ್ಕೆ ಸೋಂಕುಪೀಡಿತರ ಸಂಖ್ಯೆ 81ಕ್ಕೇರಿದೆ. ಬೆಂಗಳೂರೊಂದರಲ್ಲೇ 13 ಮಂದಿಗೆ ಎಚ್1ಎನ್1 ವೈರಸ್ ತಗುಲಿರುವದು ಪತ್ತೆಯಾಗಿದೆ.
ರೋಗ ತಡೆಗೆ ಸೂಕ್ತಕ್ರಮ ಕೈಗೊಳ್ಳಲಾಗಿದ್ದು, ಪುಣೆಯಿಂದ ಸಲಕರಣೆಗಳನ್ನು ಖರೀದಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಜೌಷಧಿ ಕಿಟ್‌ಗಳನ್ನು ತರಿಸಲಾಗಿದೆ. ಒಂದು ಲಕ್ಷ ತಮಿಫ್ಲೂವನ್ನು ಆಮದು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ತಮಿಫ್ಲೂ ಹಂದಿಜ್ವರದ ಔಷಧಿಯಾಗಿದೆ.
ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದಿರುವ ಅವರು ವಿರೋಧ ಪಕ್ಷಗಳ ಅನಾವಶ್ಯಕ ಟೀಕೆ ಸಲ್ಲದು ಎಂದಿದ್ದಾರೆ.
ಸೋಂಕುಪೀಡಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲೇಕ್‌ಸೈಡ್ ಆಸ್ಪತ್ರೆಯಲ್ಲಿ ಆರು ಮಂದಿ, ಮಲ್ಯ ಆಸ್ಪತ್ರೆಯಲ್ಲಿ ಮೂರು ಮಂದಿ, ರಾಜೀವ್ ಗಾಂಧಿ ಎದೆ ರೋಗ ಆಸ್ಪತ್ರೆಯಲ್ಲಿ ಇಬ್ಬರು ಹಾಗೂ ಸೇಂಟ್ ಜಾನ್ ಆಸ್ಪತ್ರೆಯಲ್ಲಿ ಒಬ್ಬ ರೋಗಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.