ತಮಿಳು ಸಂತ ಕವಿ ತಿರುವಳ್ಳುವರ್ ಪ್ರತಿಮೆ ಅನಾವರಣ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಭಾನುವಾರ ಕರೆ ನೀಡಿದ್ದ ಬಂದ್ ಸಂಪೂರ್ಣ ವಿಫಲವಾಗಿದೆ.
ಬಂದ್‌ಗೆ ಕರೆ ಕೊಟ್ಟಿದ್ದ ಕನ್ನಡ ಸಂಘಟನೆಗಳಿಂದ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಡಚಣೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಬಿಗಿ ಪೊಲೀಸ್ ಬಂದೋ ಬಸ್ತ್‌ನಲ್ಲಿ ಸಣ್ಣಪುಟ್ಟ ವಿರೋಧದ ನಡುವೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಇದಕ್ಕೆ ಪೂರ್ವಭಾವಿಯಾಗಿ ಕನ್ನಡ ಪರ ಸಂಘಟನೆಗಳ ನಾಯಕರಾದ ವಾಟಾಳ್ ನಾಗಾರಾಜ್, ಪ್ರವೀಣ್ ಶೆಟ್ಟಿ, ನಾರಾಯಣ ಗೌಡ ಸೇರಿದಂತೆ ಹಲವು ಮುಖಂಡರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಯಾವುದೇ ಚಟುವಟಿಕೆಗಳು ನಡೆಯಲಿಲ್ಲ.
ಈ ನಡುವೆ ಕರವೇ ಕಾರ್ಯಕರ್ತರು ನಗರದ ಹಲವೆಡೆಗಳಲ್ಲಿ ಪ್ರತಿಭಟನೆ, ಉರುಳು ಸೇವೆ, ರಸ್ತೆ ತಡೆ ನಡೆಸಿದರು. ಈ ವೇಳೆ ಪೊಲೀಸರು ಅವರನ್ನು ಬಂಧಿಸಿದರು. ಇದರಿಂದ ಬಂದ್ ಛಾಯೆ ಎಲ್ಲೂ ಕಾಣಲೇ ಇಲ್ಲ. ನಗರದಲ್ಲಿ ಮಾತ್ರವಲ್ಲದೆ, ರಾಜ್ಯದ ಹಲವೆಡೆಗಳಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರತಿಭಟನೆ, ಬಂದ್, ರಸ್ತೆ ತಡೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಘೋಷಿಸಿದ್ದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಇತರೆ ಕೆಲವು ಮಂದಿ ಸೇರಿದಂತೆ ಕಳೆದ ಮೂರು ದಿನಗಳಿಂದ ಬೆಂಗಳೂರು ಪೊಲೀಸರು 600ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದರು.