ರಾಜ್ಯ ರಾಜಕಾರಣದಲ್ಲಿ ರೆಸಾರ್ಟ್ ಸಂಸ್ಕೃತಿಯನ್ನು ಪರಿಚಯಿಸಿದ್ದೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಸಭೆಗಳನ್ನು ಪಕ್ಷದ ಕಚೇರಿಗಳಿಗಿಂತ ರೆಸಾರ್ಟ್‌ಗಳಲ್ಲಿ ನಡೆಸಿದ್ದೇ ಹೆಚ್ಚು ಎಂದು ದೆಹಲಿ ವಿಶೇಷ ಪ್ರತಿನಿಧಿ ಹಾಗೂ ರಾಜ್ಯ ಬಿಜೆಪಿ ವಕ್ತಾರ ವಿ.ಧನಂಜಯ್ ಕುಮಾರ್ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ನೇತೃತ್ವದ ನಿಯೋಗ ದೆಹಲಿಗೆ ತೆರಳಿದ್ದರ ಬಗ್ಗೆ ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯೆ ನೀಡಿದರು. ಕುಮಾರಸ್ವಾಮಿ ಹೇಳಿರುವಂತೆ ನಾವು ಜಾಲಿ ಟ್ರಿಪ್‌ಗಾಗಿ ದೆಹಲಿಗೆ ತೆರಳಿಲ್ಲ ಎಂದು ಪಕ್ಷದ ನಿಲುವನ್ನು ಸಮರ್ಥಿಸಿಕೊಂಡರು.
ಗೋವಿಂದರಾಜನಗರದಲ್ಲಿ ಸಚಿವರು ಪ್ರಚಾರ ನಡೆಸುವುದರಿಂದ ನ್ಯಾಯಸಮ್ಮತ ಚುನಾವಣೆ ನಡೆಯುವ ಬಗ್ಗೆ ಪ್ರಧಾನಿ ಎಚ್.ಡಿ.ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಸಚಿವರು ಬಿಜೆಪಿಗೆ ಸೇರಿದವರು. ಅವರು ಬಿಜೆಪಿ ಪರ ಪ್ರಚಾರ ನಡೆಸದೆ ಜೆಡಿಎಸ್ ಪರವಾಗಿ ಪ್ರಚಾರ ಮಾಡಬೇಕೆ?ಎಂದು ಖಾರವಾಗಿ ಪ್ರಶ್ನಿಸಿದರು. ದೇವೇಗೌಡರು ಮತ್ತು ಕುಮಾರಸ್ವಾಮಿ ಮೊದಲು ತಮ್ಮ ರಾಮನಗರ ಕ್ಷೇತ್ರವನ್ನು ಉಳಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಲಿ ಎಂದರು.
ಈಗಾಗಲೇ ಷೋಕಾಸ್ ನೋಟಿಸ್ ನೀಡಿರುವ ಎಂ.ಪಿ.ರೇಣುಕಾಚಾರ್ಯ ಅವರೊಂದಿಗೆ ಇತರ ಶಾಸಕರ ಹೇಳಿಕೆಗಳನ್ನೂ ಪಕ್ಷ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಧನಂಜಯ್ ಕುಮಾರ್ ಈ ಸಂದರ್ಭದಲ್ಲಿ ಹೇಳಿದರು.