ತಮಿಳುನಾಡಿನಲ್ಲಿ ಕವಿ, ಸಂತ ಸರ್ವಜ್ಞರ ಸ್ಥಾಪನೆಗೆ ಯಾವೊಬ್ಬ ತಮಿಳನೂ ವಿರೋಧಿಸಿಲ್ಲ. ವಿರೋಧಿಸುವುದೂ ಇಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಹೇಳಿದರು.
ಸರ್ವಜ್ಞರನ್ನು ಕೇವಲ ಕನ್ನಡದ ಕವಿ ಎಂದು ತಮಿಳರು ಪರಿಗಣಿಸಿಲ್ಲ. ಆಡು ಮುಟ್ಟದ ಸೊಪ್ಪು ಇಲ್ಲ ಎಂಬಂತೆ ಎಲ್ಲಾ ವಿಷಯಗಳ ಬಗ್ಗೆಯೂ ಉತ್ತಮೋತ್ತಮವಾಗಿ ಬರೆದಿರುವ ಸರ್ವಜ್ಞ ಒಂದೇ ಭಾಷೆ, ಒಂದೇ ಭೂಮಿಗೆ ಸೀಮಿತರಾದವರಲ್ಲ. ಮಾನವಧರ್ಮ ಸಾರಿದ ಸರ್ವಜ್ಞರ ಪ್ರತಿಮೆ ಅನಾವರಣಕ್ಕೆ ಸರ್ವ ಸಿದ್ದತೆ ಮಾಡಿದ್ದೇವೆ ಎಂದು ತಿಳಿಸಿದರು.
ಬೆಂಗಳೂರಿನ ಹಲಸೂರು ಕೆರೆ ದಂಡೆ ಸಮೀಪ ಸ್ಥಾಪಿಸಿರುವ ತಮಿಳಿನ ಸಂತ ಕವಿ ತಿರುವಳ್ಳುವರ್ ಪ್ರತಿಮೆಯನ್ನು ಭಾನುವಾರ ಅನಾವರಣ ಮಾಡಿದ ನಂತರ ಅವರು ಮಾತನಾಡಿದರು.
ಕವಿಗಳಿಗೆ ಯಾವುದೇ ಭಾಷೆಯ, ಜಾತಿಯ ಮಿತಿ ಹೇರಬಾರದು. ಚೆನ್ನೈನಲ್ಲಿ ಸರ್ವಜ್ಞರ ಪ್ರತಿಮೆ ಅನಾವರಣಕ್ಕೆ ಎಲ್ಲರೂ ಬರಬೇಕು. ಎಲ್ಲರನ್ನೂ ಸ್ವಾಗತಿಸುತ್ತೇನೆ. ತಮಿಳುನಾಡಿನಲ್ಲಿ ಕನ್ನಡಿಗರು ಇಲ್ಲಿನಂತೆಯೇ ಸುಖವಾಗಿ ಬಾಳುತ್ತಾರೆ. ನಾವು ಜೀವಿಸುತ್ತಿರುವುದು ಭಾರತದಲ್ಲಿ. ಮುಖ್ಯಮಂತ್ರಿ ಯಡಿಯೂರಪ್ಪ ತಂಡವನ್ನು ಖುದ್ದಾಗಿ ನಾನೇ ಬರ ಮಾಡಿಕೊಳ್ಳುತ್ತೇನೆ. ನಾವಿಬ್ಬರೂ ಮುಖ್ಯಮಂತ್ರಿಗಳು ಇಡೀ ದೇಶಕ್ಕೆ ಮಾದರಿಯಾಗೋಣ ಎಂದು ಹೇಳಿದರು.