ರಾಜ್ಯದ ಐದು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಕಾವು ತೀವ್ರಗೊಂಡಿದ್ದು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣರನ್ನು ಬೆಂಬಲಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
ಜೆಡಿಎಸ್ ವರಿಷ್ಠರಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಭಾನುವಾರ ಬಹಿರಂಗವಾಗಿ ಕರೆ ನೀಡಿದರು.
ಗೋವಿಂದರಾಜ ನಗರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಪರ ಕ್ಷೇತ್ರದಲ್ಲಿ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅವರ ಗೆಲುವು ಖಚಿತ ಎಂದು ಅವರು ನುಡಿದಿದ್ದಾರೆ. ಆಪರೇಷನ್ ಕಮಲದ ಗಿರಾಕಿಗಳಿಗೆ ಪಾಠ ಕಲಿಸಿ, ಏನೋ ಅಭಿವೃದ್ಧಿ ಮಾಡಿ ಬಿಟ್ಟಿದ್ದೇನೆ ಎಂದು ಬಡಾಯಿ ಕೊಚ್ಚಿ ಕೊಳ್ಳುತ್ತಿರುವವರು ರಸ್ತೆ ಡಾಂಬರೀಕರಣ ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ವ್ಯಂಗ್ಯವಾಡಿದರು.
ಇದೀಗ ಜೆಡಿಎಸ್ ಬೆಂಬಲದಿಂದ ಪ್ರಿಯಕೃಷ್ಣ ಅವರಿಗೆ ಆನೆ ಬಲ ಬಂದಾಂತಾಗಿದೆ. ಮದ್ದಾನೆಗಳ ಕಾಳಗ ಎಂದೇ ಪರಿಗಣಿಸಲಾಗಿರುವ ಈ ಕ್ಷೇತ್ರದಲ್ಲಿ ಇದೀಗ ಜೆಡಿಎಸ್ ಬೆಂಬಲದಿಂದ ಕಾಂಗ್ರೆಸ್ ಉತ್ಸಾಹದ ಪ್ರಚಾರ ಮುಂದುವರಿಸಿದೆ.