ರಾಜ್ಯಾದ್ಯಂತ ಹಂದಿಜ್ವರದ ಆತಂಕ ಹೆಚ್ಚುತ್ತಿರುವಾಗ ಆರೋಗ್ಯ ಸಚಿವ ಶ್ರೀರಾಮುಲು ನಿರ್ಲಕ್ಷ್ಯ ಕಾರ್ಯವೈಖರಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಹಲವೆಡೆ ಎಚ್1ಎನ್1 ಈಗಾಗಲೇ ತನ್ನ ಪ್ರತಾಪ ತೋರ್ಪಡಿಸಿದ್ದರೂ ಕೂಡ ಶ್ರೀರಾಮುಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಅವರ ಕಾರ್ಯವೈಖರಿ ನಮಗೆ ತೃಪ್ತಿ ತಂದಿಲ್ಲ ಎಂದು ಕಿಡಿಕಾರಿದ್ದಾರೆ.
ಹಂದಿಜ್ವರದ ಭೀತಿಯಿಂದ ಸಾರ್ವಜನಿಕರು ಕಂಗಾಲಾಗಿರುವ ಇಂತಹ ಸಂದರ್ಭದಲ್ಲಿ ಸಚಿವರು ಸ್ಥೈರ್ಯ ತುಂಬಬೇಕು. ಅದನ್ನು ಬಿಟ್ಟು ಉದಾಸೀನ ಧೋರಣೆ ತೋರಿರುವ ಅವರ ಕಾರ್ಯವೈಖರಿ ಸರಿ ಇಲ್ಲ ಎಂದು ದೂರಿದ್ದಾರೆ.
ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಶ್ರೀರಾಮುಲು ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಈ ಬಗ್ಗೆ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ಹೇಳಿದರು.