ನಗರದಲ್ಲಿ ಶಾಲಾ ಬಾಲಕನೊಬ್ಬ ಸೇರಿದಂತೆ, ನಾಲ್ವರಿಗೆ ಹಂದಿ ಜ್ವರದ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಆರೋಗ್ಯಾಧಿಕಾರಿಗಳು ಸಮೀಕ್ಷೆ ನಡೆಸಿ, ಮುಂಜಾಗರೂಕತಾ ಕ್ರಮ ಕೈಗೊಳ್ಳಲು ತಯಾರಿ ನಡೆಸಿದ್ದಾರೆ. ಉಡುಪಿ, ಮಂಗಳೂರಿನಲ್ಲಿಯೂ ಎಚ್1ಎನ್1 ಕಾಲಿಡುವ ಮೂಲಕ ಭಯ ಮೂಡಿಸಿದೆ.
ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿರುವ ಫ್ರಾಂಕ್ ಅಂಥೋನಿ ಶಾಲೆಯ ಬಾಲಕನೊಬ್ಬನಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಆ ನಿಟ್ಟಿನಲ್ಲಿ ಫ್ರಾಂಕ್ ಅಂಥೋನಿ ಶಾಲೆ ಪ್ರಾಥಮಿಕ ತರಗತಿಗಳಿಗೆ ಒಂದು ವಾರ ರಜೆ ಘೋಷಿಸಲಾಗಿದೆ. ಎರಡನೇ ತರಗತಿಯಲ್ಲಿ ಓದುತ್ತಿರುವ ಸೋಂಕಿತ ಬಾಲಕನಿಗೆ ಜಯನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೇ ರೀತಿ 26ವರ್ಷದ ಮಹಿಳೆ ಹಾಗೂ 42ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ಪತ್ತೆಯಾಗಿದೆ.
ಮಂಗಳೂರು-ಉಡುಪಿಯಲ್ಲೂ ಕಾಣಿಸಿಕೊಂಡ ಎಚ್1ಎನ್1:
ರಾಜ್ಯದ ಕರಾವಳಿ ಭಾಗದಲ್ಲೂ ಹಂದಿಜ್ವರದ ಭೀತಿ ಆವರಿಕೊಂಡಿದ್ದು, ಮಂಗಳೂರಿನಲ್ಲಿ ಈಗಾಗಲೇ 21ಮಂದಿಗೆ ಸೋಂಕು ಇರುವುದನ್ನು ಶಂಕಿಸಲಾಗಿದೆ. ಅಲ್ಲದೇ ಉಡುಪಿಯಲ್ಲಿ ತರುಣ್ ಎಂಬ ಹೋಟೆಲ್ ಸಿಬ್ಬಂದಿ, ಸುಬ್ರಹ್ಮಣ್ಯ ರಾಘವನ್ ಎಂಬ ಎಂಐಟಿ ವಿದ್ಯಾರ್ಥಿ ಸೇರಿದಂತೆ ಇಬ್ಬರಿಗೆ ಎಚ್1ಎನ್1 ಸೋಂಕು ಇರುವುದು ದೃಢಪಟ್ಟಿದೆ. ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಂದಿಜ್ವರದ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಗೃಹಸಚಿವ ವಿ.ಎಸ್.ಆಚಾರ್ಯ ಸೋಮವಾರ ಉಡುಪಿಯಲ್ಲಿ ತುರ್ತು ಸಭೆ ನಡೆಸಿದರು. ಈ ಬಗ್ಗೆ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲೆ ಸಜ್ಜಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಆರ್.ನಾಯಕ್ ಹೇಳಿದರು.