ಮೈಸೂರಿನಲ್ಲಿ ಬಂಧಿಸಿ ಬೆಳಗಾವಿ ಜೈಲಿನಲ್ಲಿಟ್ಟಿರುವ 25ಮಂದಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಬಂಧಿತರ ವಿರುದ್ಧ ಬೇರೆ ಪ್ರಕರಣಗಳಲ್ಲಿ ಬಾಡಿ ವಾರಂಟ್ ಇದೆ ಎಂಬ ಕಾರಣಕ್ಕೆ ಅವರನ್ನು ಬಿಡುಗಡೆ ಮಾಡದೆ ಜೈಲಿನಲ್ಲೇ ಇಟ್ಟುಕೊಂಡಿರುವ ಸರ್ಕಾರದ ಕ್ರಮ ಸರಿಯಲ್ಲ. ಬಾಡಿ ವಾರಂಟ್ ಎಂದರೆ ಬಂಧನದ ಆದೇಶ ಅಲ್ಲ. ಹೀಗಾಗಿ ಬಾಡಿ ವಾರಂಟ್ ಇದ್ದರೆ ನಿಯಮಾವಳಿ ಪ್ರಕಾರ ಅವರನ್ನು ಬಂಧಿಸಬೇಕು ಎಂದು ಹೇಳಿರುವ ನ್ಯಾಯಪೀಠ ಬಂಧಿತರನ್ನು ಬಿಡುಗಡೆ ಮಾಡುವಂತೆ ಆದೇಶಿಸಿತು.
ಮೈಸೂರಿನಲ್ಲಿ ಜು.9ರಂದು ನಡೆದ ಜೈಲ್ ಭರೋ ಸಂದರ್ಭದಲ್ಲಿ ಬಂಧಿಸಲಾಗಿರುವ ಕೆಲವರನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಇನ್ನು ಕೆಲವರನ್ನು ಬಿಡುಗಡೆ ಮಾಡಿ ಮತ್ತೆ ಬೇರೆ ಪ್ರಕರಣಗಳಲ್ಲಿ ಜೈಲಿಗೆ ಕಳುಹಿಸಲಾಗಿದ್ದು, ಇದು ಅಕ್ರಮ ಬಂಧನ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಮಂಜುಳಾ ಚೆಲ್ಲೂರು ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.