ವಿಜಯನಗರ ಸಾಮ್ರಾಜ್ಯದ ದೊರೆಯಾಗಿದ್ದ ಶ್ರೀಕೃಷ್ಣದೇವರಾಯನ 500ನೇ ಪಟ್ಟಾಭಿಷೇಕ ಮಹೋತ್ಸವವನ್ನು ರಾಜ್ಯಾದ್ಯಂತ ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ನವೆಂಬರ್ 1ರಿಂದ 2010ರ ಜನವರಿ 29ರವರೆಗೆ ಉತ್ಸವ ಜರುಗಲಿದೆ.
'ವಿಜಯನಗರ ಸಾಮ್ರಾಜ್ಯ ಸ್ಥಾಪಕ ವಿದ್ಯಾರಣ್ಯರ ಜನ್ಮದಿನವಾದ ನವೆಂಬರ್ ಒಂದರಂದು ಹಂಪಿಯಲ್ಲಿ ಉತ್ಸವಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗುವುದು. ನವೆಂಬರ್ 3ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಜನವರಿ 29ರಂದು ಪಟ್ಟಾಭಿಷೇಕದ ಮಹೂರ್ತ ನಿಗದಿಯಾಗಿದೆ' ಎಂದು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಜಯನಗರ ಸಾಮ್ರಾಜ್ಯದ ವೈಭವ ಮರುಹುಟ್ಟು ಪಡೆದಂತೆ ಹಂಪಿಯನ್ನು ಅಲಂಕರಿಸಲಾಗುವುದು. ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ವಿಜಯನಗರ ವೈಭವ ಕುರಿತು ಧ್ವನಿ-ಬೆಳಕಿನ ಕಾರ್ಯಕ್ರಮವನ್ನು ನಡೆಸಲಾಗುವುದು. ಅದಕ್ಕಾಗಿ ಪ್ರಭಾತ್ ಕಲಾವಿದರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಕೃಷ್ಣದೇವರಾಯ ಚಿತ್ರವಿರುವ ಅಂಚೆ ಚೀಟಿ ಹಾಗೂ ನಾಣ್ಯಗಳನ್ನು ಹೊರತರುವಂತೆ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಉತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ದೇಶ ಹಾಗೂ ವಿದೇಶಗಳಿಂದ ಗಣ್ಯರನ್ನು ಆಹ್ವಾನಿಸಲಾಗುವುದು. ವಿಜಯನಗರ ಸಾಮ್ರಾಜ್ಯದ ಅರಸರು ರಾಜಕೀಯ ಹಾಗೂ ವ್ಯಾಪಾರ ಸಂಬಂಧಗಳನ್ನು ಹೊಂದಿದ್ದ ದೇಶಗಳ ಪ್ರಧಾನಿ ಹಾಗೂ ರಾಷ್ಟ್ರಾಧ್ಯಕ್ಷರಿಗೂ ಆಹ್ವಾನ ನೀಡಲಾಗುವುದು ಎಂದರು. ಈ ಮೂರು ತಿಂಗಳ ಅವಧಿಯಲ್ಲಿ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳು ಹಂಪಿ ಮಾರ್ಗದಲ್ಲಿ ಪ್ರವಾಸ ಕಾರ್ಯಕ್ರಮ ರೂಪಿಸುವಂತೆ ಸೂಚಿಸಲಾಗಿದೆ ಎಂದೂ ರೆಡ್ಡಿ ತಿಳಿಸಿದರು.