ಎಚ್1ಎನ್1; ರಾಜ್ಯದಲ್ಲಿ ಮತ್ತೆ 3ಬಲಿ-ಸಾವಿನ ಸಂಖ್ಯೆ 32ಕ್ಕೆ
ಬೆಂಗಳೂರು, ಗುರುವಾರ, 3 ಸೆಪ್ಟೆಂಬರ್ 2009( 11:29 IST )
ಹಂದಿಜ್ವರಕ್ಕೆ ರಾಜ್ಯದಲ್ಲಿ ಮತ್ತೆ ಮೂವರು ಬಲಿಯಾಗಿದ್ದಾರೆ. ಇದರೊಂದಿಗೆ ಈ ಮಾರಣಾಂತಿಕ ರೋಗಕ್ಕೆ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 32ಕ್ಕೆ ಏರಿದೆ.
ದಾವಣಗೆರೆ ನಂತರ ಇದೀಗ ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಎಚ್1ಎನ್1 ಸೋಂಕಿನಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 16ವರ್ಷದ ರಂಜಿತ್ ಎಂಬ ವಿದ್ಯಾರ್ಥಿಯೊಬ್ಬ ರೋಗದಿಂದ ಕೊನೆಯುಸಿರೆಳೆದಿದ್ದಾನೆ.
ಆ.30ರಂದು ಬೆಳಗಾವಿಯ ಆನಗೋಳದ ದತ್ತಾತ್ರೇಯ ಕುಲಕರ್ಣಿ(36) ಎಂಬವರು ಎಚ್1ಎನ್1 ಸೋಂಕಿನಿಂದ ಮೃತಪಟ್ಟಿದ್ದರು. ಅವರ ಗಂಟಲ ಕೋಶ ಮಾದರಿಯನ್ನು ಪರೀಕ್ಷೆಗೊಳಪಡಿಸಿದಾಗ ಎಚ್1ಎನ್1 ಸೋಂಕು ಪತ್ತೆಯಾಗಿದೆ. ಪರೀಕ್ಷಾ ವರದಿ ಬುಧವಾರ ಸಿಕ್ಕಿದೆ. ಇದೇ ರೀತಿ ಬುಧವಾರ ಆರೋಗ್ಯ ಇಲಾಖೆ ನೀಡಿರುವ ವರದಿಯಂತೆ ಬೆಳಗಾವಿ, ಬಿಜಾಪುರದ ತಲಾ ಮೂವರಲ್ಲಿ, ಧಾರವಾಡದ ಇಬ್ಬರು, ಉತ್ತರ ಕನ್ನಡ, ದಾವಣಗೆರೆಯ ತಲಾ ಒಬ್ಬರು ಹಾಗೂ ಬೆಂಗಳೂರಿನ 22 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ತುಂಬು ಗರ್ಭಿಣಿ ಸಾವನ್ನಪ್ಪಿದ ದಾವಣಗೆರೆಯಲ್ಲಿ 11ತಿಂಗಳ ಕೂಸಿನಲ್ಲಿ ಸೋಂಕು ಇರುವುದು ಖಚಿತಗೊಂಡಿದೆ. ಈವರೆಗೆ ರಾಜ್ಯದಲ್ಲಿ 2302 ಶಂಕಿತ ಜನರನ್ನು ಪರೀಕ್ಷೆಗೊಳಪಡಿಸಲಾಗಿದ್ದು, 517 ಮಂದಿಯಲ್ಲಿ ಸೋಂಕು ಕಂಡುಬಂದಿದೆ.