ಮರಳು ಲಾರಿ ಮುಷ್ಕರ ಅಂತ್ಯ
ಬೆಂಗಳೂರು, ಗುರುವಾರ, 3 ಸೆಪ್ಟೆಂಬರ್ 2009( 11:50 IST )
ಕಳೆದ 13ದಿನಗಳಿಂದ ನಡೆಯುತ್ತಿದ್ದ ಮರಳು ಸಾಗಣೆ ಲಾರಿಗಳ ಮುಷ್ಕರ ಬುಧವಾರ ಅಂತ್ಯಗೊಂಡಿದೆ. ಲಾರಿ ಮಾಲೀಕರ ಜತೆ ಸಾರಿಗೆ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ನಡೆದ ಸಭೆ ಯಶಸ್ವಿಯಾಗಿದೆ. ಹೀಗಾಗಿ ಮುಷ್ಕರ ಹಿಂಪಡೆಯುವುದಾಗಿ ಲಾರಿ ಮಾಲೀಕರು ಘೋಷಿಸಿದ್ದಾರೆ.
ಇದರೊಂದಿಗೆ ಬೆಂಗಳೂರಿಗೆ ಆವರಿಸಿದ್ದ ಮರಳು ಬರ ಭೀತಿ ದೂರವಾಗಿದೆ. ಆದರೂ, ಮರಳು ಲಭ್ಯತೆ ಎಂದಿನಂತಾಗಲು ಇನ್ನೂ ಎರಡು ದಿನ ಕಾಯಬೇಕು.
ಈ ಸಂದರ್ಭದಲ್ಲಿ ಲಾರಿ ಮಾಲೀಕರ ಸಂಘದ ನಡುವಿನ ವೈಮನಸ್ಸು ಸ್ಫೋಟಗೊಂಡು ಕೆಲಕಾಲ ವಾಗ್ವಾದಕ್ಕೆ ಕಾರಣವಾಯಿತು. ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಚನ್ನಾರೆಡ್ಡಿ ಅವರನ್ನು ಸಭೆಗೆ ಆಹ್ವಾನಿಸಿರುವುದಕ್ಕೆ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಇಬ್ಬರೊಂದಿಗೂ ಪ್ರತ್ಯೇಕ ಮಾತುಕತೆ ನಡೆಸಬೇಕಾಯಿತು.
ಗೊಂದಲದ ಹೇಳಿಕೆ;ಸರ್ಕಾರ ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಿರುವ ಹಿನ್ನೆಲೆಯಲ್ಲಿ ಮುಷ್ಕರ ವಾಪಸ್ ಪಡೆಯುತ್ತಿದ್ದೇವೆ ಎಂದು ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಚನ್ನಾರೆಡ್ಡಿ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಮುಷ್ಕರ ಮುಗಿದಿದೆ ಎಂದು ಸುದ್ದಿಗೋಷ್ಠಿ ನಡೆಸುತ್ತಿದ್ದ ಸಚಿವ ಆರ್.ಅಶೋಕ್ ಅವರ ಹೇಳಿಕೆಗೆ, ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಚೀನಾದಿಂದ ಹಿಂದಿರುಗಿ ಅಧಿಕೃತ ಆದೇಶ ಹೊರಡಿಸುವ ತನಕ ಮುಷ್ಕರ ಮುಂದುವರಿಸುತ್ತೇವೆ ಎಂದು ಷಣ್ಮುಗಪ್ಪ ತಿಳಿಸಿದ್ದಾರೆ.