ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ಅನುಸಾರ ಮತಪಟ್ಟಿ, ಮತಗಟ್ಟೆ ರೂಪಿಸುವ ಕಾರ್ಯವನ್ನು ರಾಜ್ಯ ಚುನಾವಣಾ ಆಯೋಗ ಪೂರ್ಣಗೊಳಿಸಿದ್ದು, ಯಾವುದೇ ಕ್ಷಣದಲ್ಲೂ ಬಿಬಿಎಂಪಿ ಚುನಾವಣೆ ನಡೆಸಲು ಸಿದ್ಧ ಎಂದು ತಿಳಿಸಿದೆ.
ಮತದಾರರು ಯಾವ ವಾರ್ಡ್‌ನಲ್ಲಿ, ಯಾವ ಮತಗಟ್ಟೆಯಲ್ಲಿ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ ಎಂಬುದನ್ನು ಆಯಾ ವಾರ್ಡ್‌ಗಳಲ್ಲಿ ಸ್ಥಾಪಿಸಿರುವ ಮತದಾರರ ಸೇವಾ ಕೇಂದ್ರಗಳಲ್ಲಿ ಅಥವಾ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿಕೊಳ್ಳಬೇಕು ಎಂದು ರಾಜ್ಯ ಚುನಾವಣಾ ಆಯುಕ್ತ ಸಿ.ಆರ್. ಚಿಕ್ಕಮಠ ಸೂಚಿಸಿದ್ದಾರೆ.
ಬೆಂಗಳೂರಿನ 21 ವಿಧಾನಸಭಾ ಕ್ಷೇತ್ರಗಳು ಸಂಪೂರ್ಣವಾಗಿ, 7 ವಿಧಾನಸಭಾ ಕ್ಷೇತ್ರಗಳ ಭಾಗಶಃ ಪ್ರದೇಶಗಳು ಬಿಬಿಎಂಪಿ ವ್ಯಾಪ್ತಿಗೆ ಬರುತ್ತವೆ. ಪ್ರಸ್ತುತ ಸಿದ್ಧಗೊಂಡಿರುವ ಮತಪಟ್ಟಿಯ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 65 ಲಕ್ಷ ಮತದಾರರು ಇದ್ದಾರೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇನ್ನೂ ಸಮಯವಿದೆ ಎಂದು ಅವರು ತಿಳಿಸಿದ್ದಾರೆ.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಬಳಸಲಾಗಿದ್ದ ಮತಗಟ್ಟೆಗಳನ್ನು ಆಧಾರವಾಗಿ ಇಟ್ಟುಕೊಂಡು ಈಗಿನ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಇದೇ ವೇಳೆ ಮತದಾರರ ಪಟ್ಟಿ ಹಾಗೂ ಮತಗಟ್ಟೆಗಳ ಬಗ್ಗೆ ರಾಜಕೀಯ ಪಕ್ಷಗಳು ಸಾರ್ವಜನಿಕರು ಸಲಹೆ, ಸೂಚನೆಗಳಿದ್ದಲ್ಲಿ ನೀಡಬಹುದು ಎಂದು ಆಯೋಗ ತಿಳಿಸಿದೆ.