ರಾಜ್ಯದ ಹಲವೆಡೆ ಮಂಗಳವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಇನ್ನೂರಕ್ಕೂ ಹೆಚ್ಚು ಮನೆಗಳು ಕುಸಿದಿವೆ.
ಭಾರಿ ಮಳೆಯಿಂದಾಗಿ ರಾಯಚೂರು ಸೇರಿದಂತೆ ರಾಜ್ಯದ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದ್ದು, ಅಲ್ಲಲ್ಲಿ ಸಂಚಾರ ಹಾಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಬುಧವಾರ ಇಡೀ ದಿನ ರಾಜ್ಯದ ಬಹುತೇಕ ಕಡೆ ಮೋಡ ಕವಿದ ವಾತಾವರಣವಿತ್ತು. ಮುಂದಿನ 24ಗಂಟೆಗಳಲ್ಲಿ ಮತ್ತಷ್ಟು ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕು ಕೊಟ್ಟೂರು ಬಸವೇಶ್ವರ ದೇಗುಲದ 50ಅಡಿ ಎತ್ತರದ ಗೋಪುರ ಕುಸಿದಿದೆ. ಇದು 120ವರ್ಷದ ಹಳೆಯ ಐತಿಹಾಸಿಕ ಗೋಪುರ. ಆರು ಅಂತಸ್ತುಗಳಿಂದ ಕೂಡಿದ ಈ ಗೋಪುರದ ಐದು ಅಂತಸ್ತುಗಳು ಕುಸಿದಿದೆ.
ಡೋಣಿ ನದಿ ಪ್ರವಾಹದಿಂದಾಗಿ ಬಿಜಾಪುರ ಜಿಲ್ಲೆಯಲ್ಲಿ ಹಲವು ಗ್ರಾಮಗಳು ಸಂಪರ್ಕ ಕಡಿದುಕೊಂಡಿದೆ. ಹಲವು ಮನೆಗಳು, ಕೃಷಿ ಭೂಮಿ ಜಲಾವೃತವಾಗಿದೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನಲ್ಲಿ 100ಕ್ಕೂ ಅಧಿಕ ಮನೆಗಳು ಕುಸಿದಿವೆ. ಗುಲ್ಬರ್ಗ, ಬೀದರ್‌ನಲ್ಲಿ ನಗರದ ಪ್ರಮುಖ ರಸ್ತೆಗಳಿಗೆ ನೀರು ನುಗ್ಗಿ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಅದೇ ರೀತಿ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ, ಶಿರಸಿ ಭಾಗಗಳಲ್ಲಿಯೂ ಧಾರಕಾರವಾಗಿ ವರ್ಷಧಾರೆಯಾಗುತ್ತಿದ್ದು, ಹಲವಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಉಳ್ಳಾಲ, ಸಸಿಹಿತ್ಲು, ಮಲ್ಪೆ, ಉಡುಪಿ, ಕೋಟತಟ್ಟು, ಶಿರೂರು ಭಾಗಗಳಲ್ಲಿ ಸಮುದ್ರ ಕೊರತೆ ಉಂಟಾಗಿದೆ.