ಬಿಜಾಪುರ: ತೆರೆದ ಕೊಳವೆ ಬಾವಿಯಲ್ಲಿ ಬಿದ್ದಿರುವ ಮಗು ಕಾಂಚನಾಳ ದೇಹವನ್ನು ಹೊರ ತೆಗೆಯಲು ಕಾರ್ಯಾಚರಣೆ ಗುರುವಾರವೂ ಮುಂದುವರಿದಿದ್ದು, ಮಳೆ ಹಾಗೂ ಬಂಡೆಗಳಿಂದ ಅಡ್ಡಿಯಾಗಿದೆ.
ಬಾಲಕಿ ಬದುಕಿ ಉಳಿದಿಲ್ಲ ಎಂಬುದು ಖಚಿತವಾಗಿದ್ದರಿಂದ ತ್ವರಿತ ಕಾರ್ಯಾಚರಣೆಗಾಗಿ ಸ್ಫೋಟಕ ವಸ್ತುಗಳನ್ನು ಬಳಸಲಾಗುತ್ತಿದೆ. ಬಾಲಕಿ 12.5ಮೀಟರ್ ಆಳದಲ್ಲಿ ಸಿಲುಕಿ ಹಾಕಿಕೊಂಡಿದ್ದು, ಬುಧವಾರ ರಾತ್ರಿಯವರೆಗೆ 9ಮೀಟರ್ ಆಳ ತೆಗೆಯಲಾಗಿದೆ. ಒಟ್ಟಾರೆ 13ಮೀಟರ್ ಆಳ ಅಗೆಯಬೇಕಾಗಿದೆ.
ಇಡೀ ಕಾರ್ಯಾಚರಣೆಯನ್ನು ಸೇನೆಯವರು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದು, ಹಟ್ಟಿ ಚಿನ್ನದ ಗಣಿಯಿಂದ ಆಗಮಿಸಿರುವ 12ಜನ ಪರಿಣತರು ಬುಧವಾರ ಬೆಳಿಗ್ಗೆಯಿಂದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಜಿಲೆಟಿನ್ ಕಡ್ಡಿ ಬಳಸಿ ಲಘು ಸ್ಫೋಟದ ಮೂಲಕ ಬಂಡೆಗಲ್ಲನ್ನು ಒಡೆಯಲಾಗುತ್ತಿದೆ.
ಬಂಡೆಗಲ್ಲನ್ನು ಒಡೆಯಲು ಪದೇ ಪದೇ ಸ್ಫೋಟ ಮಾಡುತ್ತಿರುವುದರಿಂದ ಭೂಮಿ ಅದುರುತ್ತಿದ್ದು, ಕೊಳವೆ ಬಾವಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಬಾಲಕಿ ದೇಹ ಮತ್ತಷ್ಟು ಆಳಕ್ಕೆ ಕುಸಿಯುವ ಅಪಾಯ ಹೆಚ್ಚಿದೆ. ಈಗ ಸ್ಫೋಟಕ್ಕೆ ಮಣ್ಣು ಉದುರಿ ಬಿದ್ದಿದ್ದರಿಂದ ಬಾಲಕಿ ದೇಹವು ಮಣ್ಣಿನಲ್ಲಿ ಹುದುಗಿ ಹೋಗಿರುವ ಸಾಧ್ಯತೆ ಇದೆ.