ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ಆರ್ ರಾಜಶೇಖರ್ ರೆಡ್ಡಿ ಅವರ ದುರ್ಮರಣಕ್ಕೆ ರಾಜ್ಯ ಸರ್ಕಾರವು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಚೀನಾಕ್ಕೆ ತೆರಳಿರುವ ಮುಖ್ಯಮಂತ್ರಿಗಳು ದೂರವಾಣಿ ಮುಖೇನ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ರಾಜಕೀಯವಾಗಿ ಯಾವುದೇ ಭಿನ್ನಾಭಿಪ್ರಾಯವಿರಬಹುದು. ಆದರೆ ಕೆಲಸ ಕಾರ್ಯದಲ್ಲಿ ಅವರು ನಿಷ್ಠಾವಂತರು ಎಂದು ಹೇಳಿದರು.
ಅಲ್ಲದೆ, ಅವರ ದುರ್ಮರಣದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎರಡು ದಿನ ಶೋಕಾಚರಣೆ ನಡೆಸಲಾಗುವುದು. ಈ ನಿಟ್ಟಿನಲ್ಲಿ ಶುಕ್ರವಾರ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರಾಜಶೇಖರ್ ರೆಡ್ಡಿ ಅವರ ಅಂತ್ಯಕ್ರಿಯೆಗೆ ಭಾಗವಹಿಸಲು ರಾಜ್ಯದಿಂದ ಗೃಹ ಸಚಿವ ವಿ.ಎಸ್. ಆಚಾರ್ಯ, ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ನೇತೃತ್ವದ ನಿಯೋಗ ತೆರಳಲಿದೆ ಎಂದು ಅವರು ತಿಳಿಸಿದ್ದಾರೆ.