ಬೆಂಗಳೂರು, ಶುಕ್ರವಾರ, 4 ಸೆಪ್ಟೆಂಬರ್ 2009( 11:13 IST )
ಜೈಲಿನಲ್ಲಿ ಮನೆ ಊಟ ಸೇವಿಸಲು ಅವಕಾಶ ಮಾಡಿಕೊಡಬೇಕೆಂದು ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ಲಾಲಾ ತೆಲಗಿ ಕೋರಿಕೆಗೆ ಸಿಬಿಐ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಅರಳಿ ನಾಗರಾಜ್ ಅವರಿದ್ದ ಏಕಸದಸ್ಯ ಪೀಠದಲ್ಲಿ ತೆಲಗಿ ಸಲ್ಲಿಸಿದ್ದ ಮಧ್ಯಂತರ ಕೋರಿಕೆಗೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಸಿಬಿಐ ಈ ವಿಷಯ ತಿಳಿಸಿದೆ. ತೆಲಗಿಗೆ ಮನೆ ಊಟ ನೀಡಿದರೆ ಆತ ಈ ಅವಕಾಶವನ್ನು ನಕಲಿ ಛಾಪಾ ಕಾಗದ ದಂಧೆ ಮುಂದುವರಿಸಲು ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ.
ಈ ಹಿಂದೆ ತೆಲಗಿ ಜೈಲಿನಲ್ಲಿದ್ದುಕೊಂಡೇ ನಕಲಿ ಕಾಗದ ದಂಧೆ ಮುಂದುವರಿಸಿದ ಉದಾಹರಣೆಗಳಿವೆ. ಹಾಗಾಗಿ ಜೈನಲ್ಲಿದ್ದವರು ಮತ್ತು ಜಾಮೀನು ಪಡೆದು ಜೈಲಿನಿಂದ ಹೊರಗೆ ಇದ್ದವರ ಜತೆ ದಿನನಿತ್ಯ ಸಂಪರ್ಕದಲ್ಲಿದ್ದ. ಅಲ್ಲದೆ, ತನ್ನನ್ನು ನೋಡಲು ಬಂದವರ ಜೊತೆ ಚರ್ಚೆ ನಡೆಸುತ್ತಿದ್ದ. ಜತೆಗೆ ಮೊಬೈಲ್ ಮೂಲಕವೂ ತನ್ನ ವ್ಯವಹಾರವನ್ನು ಮುಂದುವರಿಸಿದ್ದ. ಆದ್ದರಿಂದ ಮನೆ ಊಟ ನೀಡಲು ಅನುಮತಿ ನೀಡಿದರೆ ಮತ್ತೆ ತನ್ನ ದಂಧೆ ಮುಂದುವರಿಸುವ ಸಾಧ್ಯತೆ ಇದೆ ಎಂದು ಸಿಬಿಐ ಆಕ್ಷೇಪಣೆಯಲ್ಲಿ ತಿಳಿಸಿದೆ.
ಅಲ್ಲದೆ, ಈ ಹಿಂದೆ ವಿಚಾರಣಾಧೀನ ಕೈದಿಯಾಗಿದ್ದಾಗ ಆತನಿಗೆ ಮನೆ ಊಟದ ಮಾದರಿಯಲ್ಲಿ ಆಹಾರ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಆತ ಶಿಕ್ಷೆಗೊಳಗಾದ ಕೈದಿಯಾಗಿರುವುದರಿಂದ ಇಂತಹ ಊಟ ನೀಡಲು ಕಾನೂನಿನಲ್ಲಿ ಆವಕಾಶವಿಲ್ಲ ಎಂದು ಪ್ರತಿಪಾದಿಸಿರುವ ಸಿಬಿಐ, ಆರೋಗ್ಯದ ದೃಷ್ಟಿಯಿಂದ ವೈದ್ಯರು ಹೇಳಿದಂತೆ ಪಥ್ಯದ ಊಟ ನೀಡಲಾಗುತ್ತಿದೆ ಎಂದು ತಿಳಿಸಿದೆ.
ಆತ್ಮಚರಿತ್ರೆ:ಆತ್ಮಚರಿತ್ರೆ ಬರೆಯುತ್ತಿರುವ ತೆಲಗಿ ಬೆಂಗಳೂರಿನ ಜೈಲಿನಲ್ಲಿರುವಾಗಲೇ ಇದನ್ನು ಪೂರ್ಣಗೊಳಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಪುಣೆ ಜೈಲಿನಲ್ಲಿರುವಾಗಲೇ ಆತ್ಮಚರಿತ್ರೆ ಬರೆಯಲು ಪ್ರಾರಂಭಿಸಿದ್ದೆ. ಅಲ್ಲಿ ಸುಮಾರು 1,600 ಪುಟಗಳಷ್ಟು ಬರೆದಿದ್ದೇನೆ. ಬೆಂಗಳೂರಿಗೆ ಬಂದ ಬಳಿಕ ಸುಮಾರು 120 ಪುಟ ಬರೆದಿದ್ದೇನೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಆತ್ಮ ಚರಿತ್ರೆ ಬರೆಯುವುದರಿಂದ ಬೆದರಿಕೆ ಬಂದಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ ನನಗೆ ಎಲ್ಲಾ ರೀತಿಯ ಭದ್ರತೆ ಒದಗಿಸಲಾಗಿದೆ. ಇದರಿಂದ ಬೆದರಿಕೆಯ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.