ಹೆಚ್ಚು ಸಮಯ ಹೆಲಿಕಾಪ್ಟರ್‌ನಲ್ಲಿ ಹಾರಾಡುವವರಲ್ಲಿ ಸಿಎಂ ಅಗ್ರಗಣ್ಯ
ಬೆಂಗಳೂರು, ಶುಕ್ರವಾರ, 4 ಸೆಪ್ಟೆಂಬರ್ 2009( 11:37 IST )
NRB
ದೇಶದ ಪ್ರಮುಖ ರಾಜಕಾರಣಿಗಳು ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿರುವ ಸಾಲಿಗೆ ಇದೀಗ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಕೂಡ ಸೇರಿದಂತಾಗಿದೆ. ಆದರೆ ಇವೆಲ್ಲವೂ ಹೆಲಿಕಾಪ್ಟರ್‌ಗಳಲ್ಲಿನ ದೋಷ, ಹಳೆ ಹೆಲಿಕಾಪ್ಟರ್ ಬಳಕೆಯಿಂದಾಗಿಯೇ ಇಂತಹ ದುರಂತ ಸಂಭವಿಸುತ್ತಿರುವುದಾಗಿ ತನಿಖೆಯಿಂದ ಸತ್ಯಾಂಶ ಹೊರಬಿದ್ದ ನಂತರವೂ ಕೂಡ ಎಚ್ಚರಿಕೆ ಬಂದಂತಿಲ್ಲ. ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಪ್ಟರ್ ಕೂಡ ಪೂರ್ಣಪ್ರಮಾಣದಲ್ಲಿ ಸುರಕ್ಷಿತವಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಳೆದ ಆರು ತಿಂಗಳಿನಿಂದ ಬಳಸುತ್ತಿರುವ 'ಅಗಸ್ಟ-ವಿಟಿ-05'ಹೆಲಿಕಾಪ್ಟರ್‌ನಲ್ಲಿ ತುರ್ತು ಸಂದರ್ಭಕ್ಕೆ ಬೇಕಾದ ಯಾವ ಭದ್ರತಾ ಸೌಲಭ್ಯಗಳೂ ಅದರಲ್ಲಿ ಇಲ್ಲ ಎಂಬುದಾಗಿ ಕನ್ನಡಪ್ರಭ ವರದಿಯಲ್ಲಿ ತಿಳಿಸಿದೆ.
ಸಂಕಷ್ಟದ ಸಂದರ್ಭದಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಾಗುವ ಸ್ಯಾಟಲೈಟ್ ಫೋನ್ ಸಹ ಈ ಕಾಪ್ಟರ್‌ನಲ್ಲಿ ಇಲ್ಲ. ಅನಾಮಧೇಯ ಸ್ಥಳದಲ್ಲಿ ತುರ್ತು ಭೂ ಸ್ಪರ್ಶ ಮಾಡಿದಾಗ ಸ್ಥಳ ನಿರ್ದೇಶಿಸಲು ಬಳಸುವ ವಿ.ಪಿ.ಪಿಸ್ತೂಲ್ ಕೂಡ ಇದರಲ್ಲಿಲ್ಲವಂತೆ!
ಅಷ್ಟೇ ಅಲ್ಲ, ಈ ಹೆಲಿಕಾಪ್ಟರ್ ನೈಟ್ ಲ್ಯಾಂಡಿಂಗ್ ಸೌಲಭ್ಯವನ್ನೂ ಹೊಂದಿಲ್ಲ. ಇದು ಆಲ್ ವೆದರ್ (ಸರ್ವ ಹವಾಮಾನ) ಹೆಲಿಕಾಪ್ಟರ್ ಕೂಡ ಅಲ್ಲ.
ಆದರೂ ಈ ಹೆಲಿಕಾಪ್ಟರ್ ಬಳಕೆಯಿಂದಾಗಿ ಪ್ರತಿ ತಿಂಗಳು ರಾಜ್ಯದ ಬೊಕ್ಕಸಕ್ಕೆ ಒಂದು ಕೋಟಿ ರೂಪಾಯಿ ಹೊರೆಯಾಗುತ್ತಿದೆ. ದೇಶದಲ್ಲೇ ಅತಿ ಹೆಚ್ಚಾಗಿ ಹೆಲಿಕಾಪ್ಟರ್‌ನಲ್ಲಿ ಹಾರಾಡುವ ಮುಖ್ಯಮಂತ್ರಿಗಳ ಪೈಕಿ ಯಡಿಯೂರಪ್ಪ ಅಗ್ರಗಣ್ಯರು.
ಕಳೆದ ಆರು ತಿಂಗಳಿನಿಂದ ಮುಖ್ಯಮಂತ್ರಿಗಳು ತಿಂಗಳಿಗೆ 50ಗಂಟೆ ಹಾರಾಟ ನಡೆಸಿದ್ದಾರೆ ಎಂದು ವರದಿ ಹೇಳಿದೆ. ಯಡಿಯೂರಪ್ಪ ಪ್ರಸ್ತುತ ಅಮೆರಿಕ ನಿರ್ಮಿತ ಅಗಸ್ಟ-ವಿಟಿ-05 ಹೆಲಿಕಾಪ್ಟರ್ ಬಳಸುತ್ತಿದ್ದಾರೆ. ಈ ಹೆಲಿಕಾಪ್ಟರ್ ಸೇವೆ ಒದಗಿಸುವ ಗುತ್ತಿಗೆಯನ್ನು ದೆಹಲಿ ಮೂಲದ ಓಎಸ್‌ಎಸ್ ಏರ್‌ವೇಸ್ ಕಂಪೆನಿ ಪಡೆದುಕೊಂಡಿದೆ.
ಈ ಸೇವೆ ಪಡೆಯಲು ರಾಜ್ಯ ಸರ್ಕಾರ ಓಎಸ್‌ಎಸ್ ಏರ್‌ವೇಸ್ ಕಂಪೆನಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಮುಖ್ಯಮಂತ್ರಿಯವರು ಹೆಲಿಕಾಪ್ಟರ್ ಬಳಸಲಿ ಅಥವಾ ಬಳಸದಿರಲಿ ತಿಂಗಳಿಗೆ 30ಲಕ್ಷ ರೂಪಾಯಿ ಬಾಡಿಗೆ ನೀಡಲೇಬೇಕು. ಇದನ್ನು ಹೊರತುಪಡಿಸಿ ಪ್ರತಿಗಂಟೆ ಹಾರಾಟಕ್ಕೆ 1.20ಲಕ್ಷ ರೂಪಾಯಿ ಭರಿಸಬೇಕು.