ಬೆಂಗಳೂರು, ಶುಕ್ರವಾರ, 4 ಸೆಪ್ಟೆಂಬರ್ 2009( 11:48 IST )
ಎಚ್1ಎನ್1 ಸೋಂಕಿನ ಮಹಾಮಾರಿಗೆ ರಾಜ್ಯದಲ್ಲಿ ಮತ್ತೆ ನಾಲ್ವರು ಬಲಿಯಾಗಿದ್ದಾರೆ. ಇದರೊಂದಿಗೆ ಈವರೆಗೆ ಮೃತಪಟ್ಟವರ ಸಂಖ್ಯೆ 36ಕ್ಕೆ ಏರಿದೆ.
ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬರು, ಮೂವರು ಖಾಸಗಿ ಆಸ್ಪತ್ರೆಗಳಲ್ಲಿ ಆಗಸ್ಟ್ 28ರಿಂದ ಬುಧವಾರದವರೆಗೆ ನಾಲ್ವರು ಎಚ್1ಎನ್1 ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದು ಗುರುವಾರ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಗುರುವಾರ ಹೊಸದಾಗಿ 19ಜನರಲ್ಲಿ ಎಚ್1ಎನ್1 ಸೋಂಕು ಪತ್ತೆಯಾಗಿದೆ. ಹೀಗಾಗಿ ರಾಜ್ಯದಲ್ಲಿ ಈ ಸೋಂಕು ತಗುಲಿದವರ ಅಧಿಕೃತ ಸಂಖ್ಯೆ 536ಕ್ಕೆ ಏರಿದೆ.
ಆರೋಗ್ಯ ಇಲಾಖೆ ನೀಡಿರುವ ವರದಿಯಂತೆ ಬೆಳಗಾವಿ, ಬಿಜಾಪುರದ ತಲಾ ಮೂವರಲ್ಲಿ, ಧಾರವಾಡದ ಇಬ್ಬರು, ಉತ್ತರ ಕನ್ನಡ, ದಾವಣಗೆರೆಯ ತಲಾ ಒಬ್ಬರು ಹಾಗೂ ಬೆಂಗಳೂರಿನ 22 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಈವರೆಗೆ ರಾಜ್ಯದಲ್ಲಿ 2302 ಶಂಕಿತ ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ.