ಬೆಂಗಳೂರು, ಶುಕ್ರವಾರ, 4 ಸೆಪ್ಟೆಂಬರ್ 2009( 12:32 IST )
PTI
ಹೈದರಾಬಾದ್‌ನ ಲಾಲ್‌ಬಹದ್ದೂರ್ ಶಾಸ್ತ್ರಿ ಸ್ಟೇಡಿಯಂನಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಪಾರ್ಥಿವ ಶರೀರಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿಯ ದೇಶಪಾಂಡೆ ಸೇರಿದಂತೆ ಹಲವಾರು ಗಣ್ಯರು ಶುಕ್ರವಾರ ಅಂತಿಮ ನಮನ ಸಲ್ಲಿಸಿದರು.
ಅಗಲಿದ ನಾಯಕ ವೈಎಸ್‌ಆರ್ ಅವರಿಗೆ ರಾಜ್ಯದ ಗಣ್ಯಾತೀಗಣ್ಯರು ತಮ್ಮ ಅಶ್ರುತರ್ಪಣ ಅರ್ಪಿಸಿದರು. ಈ ಸಂದರ್ಭದಲ್ಲಿ ರಾಜ್ಯದ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ, ಸಚಿವ ಕೆ.ಎಚ್.ಮುನಿಯಪ್ಪ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಧರಂಸಿಂಗ್, ಸಂಸದ ಚಲುವರಾಯ ಸ್ವಾಮಿ ಸೇರಿದಂತೆ ಪ್ರಮುಖ ಗಣ್ಯರು ರೆಡ್ಡಿ ಅವರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
ಅಂತಿಮ ಮೆರವಣಿಗೆ: ಹೈದರಾಬಾದಿನ ರೆಡ್ಡಿ ನಿವಾಸದಿಂದ ಇದೀಗ ಅವರ ಪಾರ್ಥೀವ ಶರೀರವನ್ನು ಲಾಲ್ ಬಾಹದೂರ್ ಶಾಸ್ತ್ರಿ ಕ್ರೀಡಾಂಗಣಕ್ಕೆ ಒಯ್ಯಲಾಯಿತು. ತೆರೆದ ವಾಹನದಲ್ಲಿ ಸಾಗುತ್ತಿರುವ ಈ ಅಂತಿಮ ಯಾತ್ರೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದಾರೆ. ಜನತೆ ಎಲ್ಲೆಂದರಲ್ಲಿ ರೆಡ್ಡಿಯವರ ಮೃತದೇಹ ಕಣ್ಣಲ್ಲಿ ಕಾಣಬಹುದೇ ಎಂಬುದಾಗಿ ಸುತ್ತಮುತ್ತಲ ಕಡ್ಡಗಳು ಎತ್ತರ ಪ್ರದೇಶದ ಮೇಲೆ ಏರಿ ನಿಂತಿದ್ದಾರೆ. ಕ್ರೀಡಾಂಗಣದಲ್ಲಿ ಮಧ್ಯಾಹ್ನದ ತನಕ ಸಾರ್ವಜನಿಕರ ವೀಕ್ಷಣೆಗೆ ಮೃತದೇಹವನ್ನು ಇರಿಸಲಾಗಿದೆ.
ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಿಂದ ಮೃತದೇಹವನ್ನು ಹುಟ್ಟೂರಾದ ಕಡಪ್ಪಾ ಜಿಲ್ಲೆಯ ಪುಲಿವೆಂದುಲಾಕ್ಕೆ ಮಧ್ಯಾಹ್ನಕ್ಕೆ ಒಯ್ಯಲಾಗಿ ಸಂಜೆ ಅವರ ಅಂತಿಮ ಸಂಸ್ಕಾರ ನಡೆಸಲಾಗುವುದು.