ಶಿವಮೊಗ್ಗ, ಶುಕ್ರವಾರ, 4 ಸೆಪ್ಟೆಂಬರ್ 2009( 17:13 IST )
ಹಿಂದೂ ಮಹಾಸಭಾ ಗಣಪತಿ ವಿಸರ್ಜನಾಪೂರ್ವ ಮೆರವಣಿಗೆ ಸಂದರ್ಭದಲ್ಲಿ ಇಲ್ಲಿನ ಅಮೀರ್ ಅಹಮ್ಮದ್ ವೃತ್ತದಲ್ಲಿ ಕಿಡಿಗೇಡಿಗಳು ಮೆರವಣಿಗೆ ಮೇಲೆ ಕಲ್ಲು ಮತ್ತು ಚಪ್ಪಲಿ ತೂರಾಟ ನಡೆಸಿದ್ದಾರೆ. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಬಿಗು ವಾತಾವರಣವನ್ನು ತಿಳಿಗೊಳಿಸಿದ ನಂತರ ಮೆರವಣಿಗೆ ಶಾಂತಿಯುತವಾಗಿ ನಡೆಯಿತು.
ಗಣಪತಿ ಮೂರ್ತಿಯನ್ನು ಕೋಟೆ ಭೀಮೇಶ್ವರ ದೇವಾಲಯದ ಸಮೀಪದ ತುಂಗಾ ನದಿಯಲ್ಲಿ ವಿಸರ್ಜಿಸಲಾಯಿತು. ಇಂಧನ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಕುಮಾರಸ್ವಾಮಿ ಭಾಗವಹಿಸಿದ್ದ ಈ ಮೆರವಣಿಗೆ ಸಾಗುತ್ತಿದ್ದ ವೇಳೆ, ಅಮೀರ್ ಅಹಮ್ಮದ್ ಬಳಿ ಬರುತ್ತಿದ್ದಂತೆ ಕಿಡಿಗೇಡಿಗಳು ಕಲ್ಲು, ಚಪ್ಪಲಿ ತೂರಿ ಬಂದಾಗ ಗಾಬರಿಗೊಂಡ ಜನರು ದಿಕ್ಕಾಪಾಲಾಗಿ ಓಡತೊಡಗಿದರು.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಲ್ಲು ತೂರಿದವರ ಮೇಲೆ ಲಾಠಿ ಪ್ರಹಾರ ನಡೆಸಿದರು. ಅಲ್ಲದೆ ಒಬ್ಬ ಕಿಡಿಗೇಡಿಯನ್ನು ವಶಕ್ಕೆ ತೆಗೆದುಕೊಂಡರು. ನಂತರ ಪರಿಸ್ಥಿತಿ ಹತೋಟಿಗೆ ಬಂದಾಗ ಶಾಂತಿಯುತವಾಗಿ ಮೆರವಣಿಗೆ ನಡೆಯಿತು. ಕಲ್ಲು ತೂರಾಟದಲ್ಲಿ ಪೊಲೀಸ್ ಸೇರಿದಂತೆ ಐವರು ಗಾಯಗೊಂಡಿದ್ದಾರೆ.