ಬೆಂಗಳೂರು, ಶುಕ್ರವಾರ, 4 ಸೆಪ್ಟೆಂಬರ್ 2009( 18:05 IST )
ಕರ್ನಾಟಕ ಅಭಿವೃದ್ಧಿ ಕುರಿತಾಗಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಕಲ್ಪನೆಯ ಪುರ ಯೋಜನೆಯ ಹಿನ್ನೆಲೆಯಲ್ಲಿ ಸೆ.9ರಿಂದ ಅಧಿವೇಶನ ಕರೆಯಲಾಗಿದ್ದು, ಇನ್ನೂ ಹೆಚ್ಚಿನ ಸಲಹೆ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಲಾಂ ಅವರಿಗೆ ಪತ್ರ ಬರೆದಿದ್ದಾರೆ.
2005 ನವೆಂಬರ್ 20ರಂದು ನಡೆದ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಕಲಾಂ ಅವರು ಭಾಷಣ ಮಾಡಿ, ಮಿಷನ್ ಕರ್ನಾಟಕ 2020ರ ಯೋಜನೆಯಲ್ಲಿ ಗ್ರಾಮೀಣಾಭಿವೃದ್ಧಿಗೆ ನಗರಗಳ ಆದ್ಯತೆ(ಪುರ) ಎಂಬ ಕಲ್ಪನೆಯನ್ನು ರಾಜ್ಯದ ಮುಂದಿರಿಸಿದ್ದರು. ಇದರಿಂದ ಭವಿಷ್ಯದ ಕರ್ನಾಟಕ ಸುಗಮವಾಗಿ ಅಭಿವೃದ್ಧಿಯಾಗಲಿದೆ ಎಂಬುದು ಕಲಾಂ ಅವರ ಕಲ್ಪನೆಯಾಗಿತ್ತು.
ಅದರಂತೆ ತಾವು 2008-09 ಹಾಗೂ 2009-10ರ ಬಜೆಟ್‌ನಲ್ಲಿ ಮಿಷನ್ ಕರ್ನಾಟಕದ ಸಲಹೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ಇದೀಗ ತಮ್ಮ ಕಲ್ಪನೆಯ ಪುರ ಯೋಜನೆ ಸಾಕಾರಗೊಳಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಕುರಿತಂತೆ ಪ್ರತ್ಯೇಕವಾಗಿ ಚರ್ಚಿಸಲು ಅಧಿವೇಶನ ಕರೆದಿದ್ದು, ಇದು ದೇಶದ ಇತಿಹಾಸದಲ್ಲೇ ಮೊದಲು ಎಂದು ಮುಖ್ಯಮಂತ್ರಿ ಕಲಾಂಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ತಮ್ಮ ನೇತೃತ್ವದ ಸರ್ಕಾರ ಆದ್ಯತೆ ನೀಡಿದ್ದು, ಮುಂದಿನ ದಿನಗಳಲ್ಲೂ ಕೂಡ ಇದೇ ರೀತಿ ಸಲಹೆಗಳನ್ನು ತಮ್ಮ ಸರ್ಕಾರಕ್ಕೆ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಲಾಂ ಅವರನ್ನು ಕೋರಿದ್ದಾರೆ.