ರಾಜ್ಯದ ನೆರೆಪೀಡಿತ ಪ್ರದೇಶಗಳಲ್ಲಿನ ಸಂತ್ರಸ್ತರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರವು ಒಂದು ಸಾವಿರ ಕೋಟಿ ರೂಪಾಯಿಗಳ ಘೋಷಣೆಯನ್ನು ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕ್ಷಿಪ್ರವಾಗಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಸೂಚಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಉತ್ತರ ಕರ್ನಾಟಕದ ಜನರ ಕಷ್ಟ-ಕಾರ್ಪಣ್ಯಗಳಿಗೆ ರಾಜ್ಯದ ಜನತೆ ಹೃದಯಪೂರ್ವಕವಾಗಿ ಸ್ಪಂದಿಸಿದ್ದಾರೆ. ಆದ್ದರಿಂದ, ಸಾರ್ವಜನಿಕರಿಂದ ಸಂಗ್ರಹಿಸಿದ ಹಣ ಹಾಗೂ ಕೇಂದ್ರ ಸರ್ಕಾರವು ಮಂಜೂರು ಮಾಡುವ ಹಣವನ್ನು ದುರ್ವ್ಯಯ ಮಾಡದಂತೆ ಪಾರದರ್ಶಕ ರೀತಿಯಲ್ಲಿ ಖರ್ಚು ಮಾಡಬೇಕು ಎಂದು ಸಲಹೆ ನೀಡಿದರು.
ದೊಡ್ಡ ದೊಡ್ಡ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಈಗ ಕೇಂದ್ರ ಸರ್ಕಾರವು ನೀಡಿರುವ 1 ಸಾವಿರ ಕೋಟಿಯಂತಹ ಪರಿಹಾರಗಳು ಬಹಳ ಸಣ್ಣದಾಗಿ ಕಾಣುವುದು ಸಹಜ ಎಂದು ತಿಳಿಸಿ, ನೆರೆ ಪೀಡಿತ ಪ್ರದೇಶಗಳಲ್ಲಿ ಮೂಲಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಸಂಸದರ ನಿಧಿಯಿಂದ 1 ಕೋಟಿ ರೂ. ನೆರವು ನೀಡುವುದಾಗಿ ತಿಳಿಸಿದರು.
ಕೇಂದ್ರದಿಂದ ರಾಜ್ಯಕ್ಕೆ ದೊರೆಯುವ ಪರಿಹಾರ ಇದೇ ಕೊನೆಯಲ್ಲ. ಪುನರ್ವಸತಿಗಾಗಿ ಕ್ರಮಬದ್ಧವಾದ ಯೋಜನೆ ಹಾಕಿಕೊಂಡು ಸರ್ಕಾರ ಕಾರ್ಯೋನ್ಮುಖವಾಗಬೇಕು ಹಾಗೂ ಜಿಲ್ಲಾಧಿಕಾರಿಗಳ ಕಡೆಯಿಂದ ವರದಿಯನ್ನು ಪಡೆದು, ಸೂಕ್ತ ರೀತಿಯಲ್ಲಿ ಯೋಜನೆ ಸಿದ್ಧಪಡಿಸಿ, ಅವನ್ನು ಅನುಷ್ಠಾನಗೊಳಿಸಬೇಕು ಎಂದೂ ಸಹ ಕೃಷ್ಣ ಕಿವಿಮಾತು ಹೇಳಿದರು.