ರಾಜ್ಯದಲ್ಲಿ ನೆರೆ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಸರ್ಕಾರದ ಜತೆಗೆ ಪಕ್ಷಬೇಧ ಮರೆತು ಕೈಜೋಡಿಸುವುದಾಗಿ ವಿವಿಧ ರಾಜಕೀಯ ಪಕ್ಷಗಳು ಭರವಸೆ ನೀಡುವುದರೊಂದಿಗೆ ಸಂತ್ರಸ್ತರ ನೋವು ನಿವಾರಣೆಯ ಕಾರ್ಯದಲ್ಲಿ ಒಗ್ಗಟ್ಟು ಪ್ರದರ್ಶಿಸಿವೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಉಭಯ ಸದನಗಳ ಪ್ರತಿಪಕ್ಷ ನಾಯಕರು, ಸಂಸದರು, ಕೇಂದ್ರ ಸಚಿವರು, ಒಗ್ಗಟ್ಟಿನಿಂದ ನೆರೆ ಸಂತ್ರಸ್ತರ ಕಣ್ಣೀರು ಒರೆಸುವ ಸಂಕಲ್ಪ ಮಾಡಿದ್ದಾರೆ.
ಎಲ್ಲಿಯೂ ಅಕ್ರಮ ನಡೆಯದಿರಲಿ ನೆರೆ ಪೀಡಿತರ ಪರಿಹಾರ ಕಾರ್ಯದಲ್ಲಿ ಯಾವುದೇ ರೀತಿಯ ರಾಜಕಾರಣ ಮಾಡದೆ, ರಾಜಕೀಯ ಲಾಭ ನೀರೀಕ್ಷೆ ಮಾಡದೆ, ಪ್ರಾಮಾಣಿಕತೆ, ಪಾರದರ್ಶಕತೆಯಿಂದ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು. ಸಂಗ್ರಹವಾಗುವ, ಕೇಂದ್ರದಿಂದ ದೊರಕುವ ಮತ್ತು ರಾಜ್ಯದ ಹಣ ಎಲ್ಲಿಯೂ ಅಕ್ರಮಕ್ಕೆ ಸಿಲುಕದಂತೆ ಎಚ್ಚರವಹಿಸಬೇಕೆಂದು ಸಲಹೆ ಕೇಳಿ ಬಂದವು.
ತಾತ್ಕಾಲಿಕ ಹಾಗೂ ಶಾಶ್ಚತವಾದ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವುದು ಅವಶ್ಯಕ. ಜೊತೆಗೆ ಸಾಂಕ್ರಮಿಕ ರೋಗಗಳು ಹರಡದಂತೆ ಕೂಡಲೇ ಎಚ್ಚರಿಕೆ ವಹಿಸಬೇಕು ಸೇರಿದಂತೆ ಹಲವು ಉಪಯುಕ್ತ ಸಲಹೆಗಳನ್ನು ನಾಯಕರು ಸರ್ಕಾರಕ್ಕೆ ನೀಡುವ ಮೂಲಕ, ನೆರೆ ಹಾವಳಿಯ ಪರಿಹಾರದಲ್ಲಿ ಸರ್ಕಾರ ಸಾಗುವ ದಿಕ್ಕಿಗೆ ಮಾರ್ಗದರ್ಶನ ಮಾಡಿದರು.
ಅನುದಾನ ಬಳಕೆಯಾಗಲಿ ಕೇಂದ್ರ ಸರ್ಕಾರ ಈವರೆಗೆ ನೀಡಿರುವ ಅನುದಾನವನ್ನು ಬಳಕೆ ಮಾಡದೇ ಮತ್ತೆ ನೆರವು ಕೇಳಲು ಹೋಗುವುದು ಸರಿಯಲ್ಲ. ಕೊಟ್ಟ ಹಣವನ್ನು ವೆಚ್ಚ ಮಾಡುವ ಬಗ್ಗೆ ಮೊದಲು ಯೋಜನೆ ರೂಪಿಸಿ, ನಂತರ ಮತ್ತೆ ಅನುದಾನ ಕೇಳೋಣ. ಮಳೆ ಹಾನಿ ಕುರಿತ ಸಮೀಕ್ಷೆಯೂ ಚುರುಕಾಗಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.
ಪರಿಹಾರ ಕಾರ್ಯಕ್ರಮಗಳ ಮೇಲೆ ನಿಗಾ ವಹಿಸಲು ವಿಶೇಷ ಘಟಕಗಳನ್ನು ಅಸ್ತಿತ್ವಕ್ಕೆ ತರಬೇಕು. ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನೇರವಾಗಿ ಈ ಘಟಕಗಳ ಉಸ್ತುವಾರಿ ಹೊತ್ತುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಹಳ್ಳಿಗಳಿಗೆ ಹೋಗಲು ಕುಮಾರ್ ಸಲಹೆ ಬೆಂಗಳೂರಿನಲ್ಲೇ ಕುಳಿತು ಪರಿಹಾರದ ಬಗ್ಗೆ ಮಾತನಾಡುವ ಕುರಿತು ಅತೃಪ್ತಿ ವ್ಯಕ್ತಪಡಿಸಿದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಕೆಲವು ತಿಂಗಳವರೆಗೆ ಸಚಿವರನ್ನು ಪ್ರವಾಹ ಪರಿಹಾರ ಕಾರ್ಯದ ಉಸ್ತುವಾರಿಗೆ ನಿಯೋಜನೆ ಮಾಡಬೇಕು ಎಂದರು.
ಯಡಿಯೂರಪ್ಪ ಶ್ಲಾಘನೆ ರಾಜ್ಯದ ಹಲವು ಜಿಲ್ಲೆಗಳು ಭೀಕರ ಪ್ರವಾಹದ ಸ್ಥಿತಿಯನ್ನು ಎದುರಿಸಿದ ಸಂದರ್ಭದಲ್ಲಿ ವಿರೋಧ ಪಕ್ಷಗಳು ನೀಡಿದ ಸಹಕಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನಸಾರೆ ಕೊಂಡಾಡಿದರು. ರಕ್ಷಣಾ ಕಾರ್ಯಾಚರಣೆ ಮತ್ತು ನೆರವು ಪಡೆಯುವುದರಲ್ಲಿ ಪ್ರತಿಪಕ್ಷಗಳಿಂದ ನಿರೀಕ್ಷೆಗೂ ಮೀರಿದ ಬೆಂಬಲ ದೊರಕಿದೆ ಎಂದರು.
ಭಾನುವಾರ ವಿಧಾನಸೌಧದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ವೈಮಾನಿಕ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಹಾಜರಿದ್ದ ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿ, ಎಸ್.ಎಂ.ಕೃಷ್ಣ, ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮತ್ತಿತರರು ರಾಜ್ಯ ಸರ್ಕಾರದ ಬೇಡಿಕೆಯನ್ನು ಬೆಂಬಲಿಸಿದ್ದು ಸಂತಸ ತಂದಿದೆ ಎಂದು ಹೇಳಿದರು.