ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಲು ಸೋಮವಾರ ಒಂದೇ ದಿನ ಸುಮಾರು 70 ಕೋಟಿ ರೂಪಾಯಿ ಭರವಸೆ ಸಿಕ್ಕಿದೆ ಎಂದು ತಿಳಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಐಟಿ ಸಂಸ್ಥೆಯಾದ ಸಿಸ್ಕೋ 4000 ಮನೆಗಳನ್ನು ನಿರ್ಮಿಸಲು ಮುಂದೆ ಬಂದಿದೆ ಎಂದು ಹೇಳಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ತನ್ನನ್ನು ಭೇಟಿ ಮಾಡಿರುವ ಸಿಸ್ಕೋ ಸಂಸ್ಥೆ ಅಧಿಕಾರಿಗಳು 50 ಕೋಟಿ ರೂಪಾಯಿ ನೀಡುವ ಭರವಸೆ ನೀಡಿದ್ದಾರೆ ಅಲ್ಲದೆ, ಕೇವಲ ಮನೆಗಳಲ್ಲದೆ, ಆಸ್ಪತ್ರೆ ಮತ್ತು ಶಾಲಾ ಕಟ್ಟಡಗಳನ್ನು ನಿರ್ಮಿಸುವುದಾಗಿಯೂ ಆಶ್ವಾಸನೆ ನೀಡಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ ಅವರು ಐದು ಕೋಟಿ ರೂಪಾಯಿಗಳ ಚೆಕ್ ಅನ್ನು ಪರಿಹಾರ ನಿಧಿಗೆ ಅರ್ಪಿಸಿದರೆ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ವತಿಯಿಂದ ಎರಡು ಕೋಟಿ ನೀಡಲಾಗಿದೆ. ನಿಗಮದ ಅಧ್ಯಕ್ಷ ವೈ.ಎನ್.ಮನ್ಮಥ ಚೆಕ್ ನೀಡಿದರು.
ಬಿಎಚ್‌ಇಎಲ್‌ನ ಬೆಂಗಳೂರು ಘಟಕದ ನೌಕರರು ತಮ್ಮ ಒಂದು ದಿನದ ವೇತನವಾದ 35 ಲಕ್ಷ ರೂಪಾಯಿ ಚೆಕ್ ನೀಡಿರುವುದಾಗಿ ಅವರು ತಿಳಿಸಿದ್ದಾರೆ.