ದೇಶದ ಪ್ರತಿಯೊಬ್ಬನಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬದುಕುವ ಸಮಾನ ಹಕ್ಕು ಕಾನೂನು ತರುವ ಯೋಜನೆಯನ್ನು ಸರ್ಕಾರ ಹೊಂದಿದ್ದು, ಈ ಮೂಲಕ ಮುಂದಿನ ಐದು ವರ್ಷದಲ್ಲಿ ದೇಶದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವಲ್ಲಿ ಪ್ರಯತ್ನಿಸಲಾಗುವುದು ಎಂದು ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಭಿವೃದ್ದಿಯಲ್ಲಿ ಜಾತಿ ಮುಖ್ಯ ಅಲ್ಲ, ವ್ಯಕ್ತಿ ಮುಖ್ಯ. ಯಾವೊಬ್ಬ ವ್ಯಕ್ತಿಯಲ್ಲೂ ಅನಾಥ ಪ್ರಜ್ಞೆ ಸಲ್ಲದು. ದೇಶದಲ್ಲಿ ಲಕ್ಷಾಂತರ ಅವಕಾಶಗಳಿವೆ. ಅದನ್ನು ಪಡೆಯಲು ಜನರು ಶಿಕ್ಷಣವಂತರಾಗಬೇಕು. ಯುವಕರಿಗೆ ಶಿಕ್ಷಣದೊಂದಿಗೆ ನೌಕರಿಯನ್ನು ನೀಡುವ ಯೋಜನೆಯು ಕೇಂದ್ರ ಸರ್ಕಾರದಲ್ಲಿದೆ" ಎಂದು ತಿಳಿಸಿದರು.
ಇದೇ ವೇಳೆ ಕರ್ನಾಟಕದ ಜನರಿಗೆ ಆರ್ಥಿಕ ಸುಭದ್ರತೆ ನೀಡುವುದು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ರಾಜ್ಯಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯೊಂದನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು. ಅಲ್ಲದೆ, ಪಶ್ಚಿಮ ವಾಹಿನಿ ಯೋಜನೆಯ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗದ್ದೆಗದ್ದೆಗೆ ನೀರು ಸರಬರಾಜು ಯೋಜನೆಯೊಂದನ್ನೂ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.