ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಉದಾರವಾಗಿ ನೀಡಿರುವ ದೇಣಿಗೆ ಹಾಗೂ ಪರಿಹಾರ ಸಾಮಗ್ರಿಗಳು ನೆರೆ ಪ್ರದೇಶಕ್ಕೆ ಸರಿಯಾಗಿ ಸರಬರಾಜಾಗುವಂತಹ ವ್ಯವಸ್ಥೆಯನ್ನು ಸರ್ಕಾರ ಕೈಗೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ತರ ನೆರವಿಗೆ ಸಾರ್ವಜನಿಕರು ಉದಾರವಾಗಿ ಕೊಡುಗೆ ನೀಡುತ್ತಿದ್ದಾರೆ. ಇದರ ದುರ್ಬಳಕೆಯಾಗದಂತೆ ಸರ್ಕಾರ ಎಚ್ಚರ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ಪರಿಹಾರ ಸಾಮಗ್ರಿಗಳನ್ನು ನೆರೆ ಪ್ರದೇಶಕ್ಕೆ ತಲುಪಿಸುವುದು ಮತ್ತು ಪೊಲೀಸ್ ರಕ್ಷಣೆಯಡಿ ಅರ್ಹ ಸಂತ್ರಸ್ತರಿಗೆ ಪರಿಹಾರ ಸಮಾಗ್ರಿಗಳು ದೊರೆಯುವಂತಹ ವ್ಯವಸ್ಥೆ ಮಾಡಬೇಕೆಂದು ಅವರು ಹೇಳಿದ್ದಾರೆ.
ನಾಡಿನ ಇತಿಹಾಸದಲ್ಲೇ ಅತ್ಯಂತ ಭೀಕರವಾಗಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಉತ್ತರ ಕರ್ನಾಟಕ ಜಿಲ್ಲೆಗಳು ನಲುಗಿ ಹೋಗಿದ್ದು ರೈತ ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ. ಈ ನಿಟ್ಟಿನಲ್ಲಿ ಅರ್ಹ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳು ದೊರೆಯುವಂತಹ ವ್ಯವಸ್ಥೆ ಮಾಡಬೇಕೆಂದು ಅವರು ಹೇಳಿದ್ದಾರೆ.
ಇದೇವೇಳೆ ಉತ್ತರ ಕರ್ನಾಟಕದಲ್ಲಿ ಮಳೆ ಹಾನಿಗೆ ಒಳಗಾದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಆರ್. ವಿ. ದೇಶಪಾಂಡೆ, ಇದನ್ನು ತಡೆಯಲು ಸರ್ಕಾರ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಬೆಳೆ ನಾಶದಿಂದ ಐವರು ಈಗಾಗಲೇ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರವೃತ್ತಿ ಇನ್ನು ಮುಂದುವರೆಯುವ ಸಾಧ್ಯತೆಗಳಿದ್ದು, ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಆಗಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.