ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಹೊಸದಾಗಿ ತೆರಿಗೆ ವಿಧಿಸುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರ್ಧಾರವನ್ನು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧಿಸಿದ್ದಾರೆ. ಅಲ್ಲದೆ, ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರು ಹೊಸ ತೆರಿಗೆಯಿಂದ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ಮತ್ತು ಇನ್ನಷ್ಟು ಬೆಲೆ ಏರಿಕೆಯಾಗಿ ಹಣದುಬ್ಬರಕ್ಕೆ ಕಾಣವಾಗುತ್ತದೆ. ಹೀಗಿರುವಾಗ ಯಾವುದೇ ಕಾರಣಕ್ಕೂ ಪ್ರವಾಹ ತೆರಿಗೆ ವಿಧಿಸಬಾರದು ಎಂಬುದಾಗಿ ಅವರು ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ತೆರಿಗೆ ಸೋರಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಸಂಪನ್ಮೂಲ ಕ್ರೋಡೀಕರಿಸುವುದು ಕಷ್ಟಕರವಾಗುವುದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ತೆರಿಗೆ ಸೋರಿಕೆ ತಡೆಗೆ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ ಸಾಕಷ್ಟು ತೆರಿಗೆ ಹಣ ಹರಿದು ಬರುತಿತ್ತು. ಸೋರಿಕೆ ತಡೆಯಲಾಗದೆ ಹೊಸ ತೆರಿಗೆ ಹಾಕುವುದಾಗಿ ಹೇಳುತ್ತಿರುವುದು ಅವಿವೇಕತನ ಹಾಗೂ ಅಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತೆರಿಗೆ ಸಂಗ್ರಹಕ್ಕೆ ಸರ್ಕಾರ ಸೂಕ್ತಕ್ರಮ ಕೈಗೊಳ್ಳದೆ ಇರುವ ಕಾರಣ ಹಣದ ಕೊರತೆ ಎದುರಿಸಬೇಕಾಗಿದೆ. ಕೇಂದ್ರ ಸರ್ಕಾರ ನೆರವು ನೀಡುವಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಆಂಧ್ರ ಪ್ರದೇಶಕ್ಕೆ ನೀಡಿದಂತೆ ಕರ್ನಾಟಕಕ್ಕೂ ಸಾವಿರ ಕೋಟಿ ಪರಿಹಾರ ನೀಡುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.. ಎರಡೂ ರಾಜ್ಯಗಳನ್ನು ಸಮನಾಗಿ ನೋಡಿರುವ ಕಾರಣ ಯಾವುದೇ ತಾರತಮ್ಯವಾಗಿಲ್ಲ. ಕೇಂದ್ರದ ಮೇಲೆ ಬೇಜವಾಬ್ದಾರಿ ಹಾಗೂ ದುರುದ್ದೇಶಪೂರಿತ ಆರೋಪ ಮಾಡಲಾಗುತ್ತಿದೆ ಎಂದು ಅವರು ನುಡಿದರು.
ನೆರೆ ಪ್ರದೇಶದಲ್ಲಿ ಬೆಳೆ ಪರಿಹಾರವನ್ನು ಹೆಕ್ಟೇರ್‌ಗೆ ರೂ. 10 ಸಾವಿರಕ್ಕೆ ಏರಿಸಬೇಕು, ಬೆಳೆ ಸಾಲ ಮನ್ನಾ ಮಾಡಬೇಕು, ಅಲ್ಲದೆ, ಹೊಸದಾಗಿ ಗೊಬ್ಬರ, ಬೀಜವನ್ನು ಉಚಿತವಾಗಿ ನೀಡಬೇಕು ಎಂದು ಒತ್ತಾಯಿಸಿದ ಅವರು ನೆರವು ನೀಡುವ ಸಮಯದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.