ಕೇಂದ್ರದ ನೆರವು ಹಾಗೂ ಸಂಘ ಸಂಸ್ಥೆಗಳ ಕೊಡುಗೆಗಳ ಹೊರತಾಗಿಯೂ ಪ್ರವಾಹ ಪೀಡಿತ ಪ್ರದೇಶಗಳ ಪುನರ್ವಸತಿಗಾಗಿ ಸಾಲ ರೂಪದಲ್ಲಿ 2500 ಕೋಟಿ ಮತ್ತು ವಿಶೇಷ ತೆರಿಗೆ ರೂಪದಲ್ಲಿ 2500 ಕೋಟಿ ರೂ. ಸಂಗ್ರಹಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದು, ತೆರಿಗೆ ವಿಧಿಸಬಹುದಾದ ವಸ್ತುಗಳ ಬಗ್ಗೆ ಸ್ಪಷ್ಟ ರೂಪುರೇಷೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲಹೆ ನೀಡಿದ್ದಾರೆ.
ಈ ನಡುವೆ ಪ್ರವಾಹದಿಂದ ಕೊಚ್ಚಿ ಹೋಗಿರುವ ಕೃಷಿ ಬೆಳೆಗೆ ಕೇಂದ್ರ ಸರ್ಕಾರದ ವಿಪತ್ತು ಪರಿಹಾರ ನಿಧಿಯ ನಿಯಮಾವಳಿ ಅನುಸಾರ ನೀಡುವ ಪರಿಹಾರಕ್ಕೆ ಅಷ್ಟೇ ಮೊತ್ತವನ್ನು ಸೇರಿಸಿ ದ್ವಿಗುಣಗೊಳಿಸುವ ಬಗ್ಗೆಯೂ ಸಚಿವ ಸಂಪುಟದಲ್ಲಿ ಗಂಭೀರ ಚರ್ಚೆ ನಡೆಸಲಾಯಿತು.
ಜೊತೆಗೆ ಪುನರ್ವಸತಿಗಾಗಿ ತುರ್ತಾಗಿ 2500 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುವ ಸಂಬಂಧ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿದೆ. ಇದರಲ್ಲಿ ಕೇಂದ್ರ ಸರ್ಕಾರಿದಂದ ಬರಬೇಕಿದ್ದ 1000 ಕೋಟಿ ರೂ. ರಾಜ್ಯ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿರುವ 505 ಕೋಟಿ ರೂಪಾಯಿಗಳು ಸೇರಿವೆ.
ನಿರಂತರ ಮುಂದುವರಿಯಲಿರುವ ತೆರಿಗೆ: ಇದೇ ವೇಳೆ ಹಣಕಾಸಿನ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರ ಇದೀಗ ಸಂಪನ್ಮೂಲ ಕ್ರೋಢೀಕರಿಸಲು ವಿವಿಧ ಮಾರ್ಗಗಳನ್ನು ಹುಡುಕುತ್ತಿದ್ದು, ಕಬ್ಬಿಣದ ಅದಿರು ಮತ್ತಿತರ ಭಾರಿ ತೂಕದ ಸರಕು ಸಾಗಣೆಗೆ ರಸ್ತೆ ಸುಂಕ ವಿಧಿಸಲು ತೀರ್ಮಾನಿಸಿದೆ.
ಇದು ಬರುವ ನವೆಂಬರ್ 15ರಿಂದ ಜಾರಿಗೆ ಬರಲಿದ್ದು, ಇದು ನೆರೆ ಪರಿಹಾರವಲ್ಲ. ನಿರಂತರವಾಗಿ ಮುಂದುವರಿಯಲಿರುವ ತೆರಿಗೆ ಎಂದು ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ತಿಳಿಸಿದ್ದಾರೆ.