ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಗುರಿಯಾದ ನಂತರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಇದೇ ಮೊದಲ ಬಾರಿ ನ್ಯಾಯಾಲಯ ಕಲಾಪವನ್ನು ದಿಢೀರ್ ರದ್ದುಗೊಳಿಸಿದ್ದಾರೆ. ಈ ಮೂಲಕ ಹಲವು ವದಂತಿಗಳಿಗೆ ಎಡೆ ಮಾಡಿಕೊಟ್ಟಿದೆ.
ಕಲಾಪ ರದ್ದುಗೊಳಿಸಿರುವ ಮುಖ್ಯ ನಾಯಮೂರ್ತಿಗಳ ದಿಢೀರ್ ಕ್ರಮಕ್ಕೆ ಕಾರಣ ತಿಳಿದು ಬಂದಿಲ್ಲವಾದರೂ, ತಮ್ಮ ವಿರುದ್ಧ ಹಿರಿಯ ವಕೀಲರು ಮಾಡಿರುವ ಆರೋಪಗಳಿಗೆ ಸ್ಪಷ್ಟನೆ ನೀಡುವಂತೆ ಸುಪ್ರಿಂ ಕೋರ್ಟ್ ಮುಖ್ಯ ನಾಯಮೂರ್ತಿಗಳು ಮತ್ತು ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಸಲಹಾ ಸಮಿತಿ ಸೂಚಿಸಿರುವ ಹಿನ್ನೆಲೆಯಲ್ಲಿ ದಿನಕರನ್ ಕಲಾಪ ರದ್ದುಗೊಳಿಸಿ ಸ್ಪಷ್ಟನೆ ಸಿದ್ಧಪಡಿಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬಂದವು.
ದಿನಕರನ್ ವಿರುದ್ಧ ತಮಿಳುನಾಡಿನಲ್ಲಿ ಆರೋಪಗಳು ಮುಂದುವರಿಯುತ್ತಿರುವುದರಿಂದ ಮತ್ತು ಈ ಆರೋಪಗಳಿಗೆ ಹೆಚ್ಚಿನ ಬಲ ಬರುತ್ತಿರುವ ಹಿನ್ನೆಲೆಯಲ್ಲಿ ಅವರು ಕಲಾಪ ರದ್ದುಗೊಳಿಸಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿವೆ.
ಇದೇ ವೇಳೆ ದಿನಕರನ್ ವಿರುದ್ಧದ ಆರೋಪ ಕುರಿತು ಚರ್ಚಿಸಲು ಗುರುವಾರ ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಸಲಹಾ ಸಮಿತಿ ಸಭೆ ನಡೆಯಲಿದೆ. ಆರೋಪಗಳ ಕುರಿತು ನ್ಯಾಯಮೂರ್ತಿ ದಿನಕರನ್ ಅವರು ನೀಡುವ ಸ್ಪಷ್ಟನೆಯನ್ನು ಪರೀಶೀಲಿಸಿ ಗುರುವಾರದ ಸಲಹಾ ಸಮಿತಿ ಸಭೆ ಮುಂದಿಡಲಿದ್ದಾರೆ.
ನ್ಯಾಯಮೂರ್ತಿ ದಿನಕರನ್ ವಿರುದ್ಧದ ಆರೋಪಗಳು, ಈ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ನೇಮಿಸಿದ ಸಮಿತಿ ನಡೆಸಿದ ತನಿಖೆಯ ವರದಿ ಮತ್ತು ಇವುಗಳಿಗೆ ನ್ಯಾ| ದಿನಕರನ್ ನೀಡಿರುವ ವಿವರಣೆಗಳ ಬಗ್ಗೆ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.