ಕಟ್ಟಡದ ಜಗಲಿಯೊಂದರ ಮೇಲೆ ಮಲಗಿದ್ದ 40ರ ಹರೆಯದ ಕೂಲಿ ಕಾರ್ಮಿಕನೊಬ್ಬನ ಮೇಲೆ ಐದು ಕಾಮುಕರು ಅತ್ಯಾಚಾರ ಎಸಗಿರುವ ವಿಲಕ್ಷಣ ಹಾಗೂ ಅಮಾನವೀಯ ಘಟನೆ ತುಮಕೂರಿನಲ್ಲಿ ಸಂಭವಿಸಿದೆ. ಈ ಕುರಿತು ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಐದು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ರಾಮಚಂದ್ರ ಎಂಬ ವ್ಯಕ್ತಿಯೇ ಈ ಲೈಂಗಿಕ ಹಲ್ಲೆಗೆ ಈಡಾಗಿರುವ ಬಲಿಪಶುವಾಗಿದ್ದಾರೆ. ತುಮಕೂರಿನ ಎಂಜಿ ರಸ್ತೆಯ 2ನೆ ಕ್ರಾಸ್ನಲ್ಲಿರುವ ವಕೀಲರೊಬ್ಬರ ಕಚೇರಿಯ ಬಳಿಯಲ್ಲಿ ಮಲಗಿದ್ದ ವೇಳೆ ರಾತ್ರಿಯಲ್ಲಿ ಇವರನ್ನು ತಮ್ಮ ಕಾಮತೃಷೆಗೆ ಬಳಸಿಕೊಂಡಿರುವ ವ್ಯಕ್ತಿಗಳು ಬಳಿಕ ಇವರನ್ನು ನಾಲ್ಕು ಮಹಡಿಯ ಮೇಲಿನಿಂದ ಕೆಳಗೆ ಎಸೆದಿದ್ದರು ಎಂದು ದೂರಲಾಗಿದೆ.
ಈ ಸಂಬಂಧ ರಿಕಿ, ರಿಂಕು, ಪ್ರಾಣ್, ಪ್ರದೀಪ್ ಹಾಗೂ ರಾಜ್ ಎಂಬ ಐವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಐವರೂ ಆರೋಪಿಗಳೂ ಸಹ ಉತ್ತರ ಭಾರತದವರಾಗಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಬಲಿಪಶು ರಾಮಚಂದ್ರರಿಗೆ ಚಿಕಿತ್ಸೆ ನೀಡಲಾಗಿದ್ದು, ಇವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ವೈದ್ಯಕೀಯ ವರದಿ ಬಂದ ಬಳಿಕ ವಾಸ್ತವವೇನೆಂದು ತಿಳಿಯಲಿದೆ.
ತುಮಕೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379 ಹಾಗೂ 307ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.