ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಐಎಎಸ್ ಅಧಿಕಾರಿಯೊಬ್ಬರನ್ನು ನೇಮಿಸುವ ವಿಚಾರದಲ್ಲಿ ಕೆಎಂಎಫ್ ಚುನಾಯಿತ ನಿರ್ದೇಶಕರು ಮತ್ತು ಆಡಳಿತಾರೂಢ ಬಿಜೆಪಿ ನಡುವೆ ಸಂಘರ್ಷ ಕಾಣಿಸಿಕೊಂಡಿದೆ.
ಈ ಸ್ಥಾನಕ್ಕೆ ಐಎಎಸ್ ಅಧಿಕಾರಿಯನ್ನೇ ತಂದು ಕೂರಿಸಬೇಕೆಂದು ಬಿಜೆಪಿ ಹಠ ಹಿಡಿದಿದ್ದರೆ, ಬೇಡ ಎನ್ನುವುದು ಬಹುತೇಕ ನಿರ್ದೇಶಕರುಗಳ ವಾದವಾಗಿದೆ. ಕಳೆದ 14 ವರ್ಷಗಳಿಂದ ಕೆಎಂಎಫ್ ಆಳ್ವಿಕೆ ನಡೆಸಿದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಬಣವನ್ನು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸೋಲಿಸಿ ಬಿಜೆಪಿ ಅಧಿಕಾರದ ಗದ್ದುಗೆ ಏರಿತ್ತು. ಅಧಿಕಾರಕ್ಕೆ ಬಂದ ದಿನಗಳಿಂದ ಐಎಎಸ್ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರ ಸ್ಥಾನಕ್ಕೆ ತರುವ ವಿಚಾರವನ್ನ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ.
ಆದರೆ ಈ ಪ್ರಸ್ತಾಪವನ್ನು ಬಹುತೇಕ ನಿರ್ದೇಶಕರು ತಳ್ಳಿ ಹಾಕಿದ್ದು, ಯಾವುದೇ ಕಾರಣಕ್ಕೂ ಐಎಎಸ್ ಅಧಿಕಾರಿಯನ್ನು ಎಂ.ಡಿ. ಹುದ್ದೆಗೆ ತರಬಾರದು ಎಂದು ಒತ್ತಡ ಹೇರಿದ್ದಾರೆ. ನೆರೆಯ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಉನ್ನತ ಹುದ್ದೆಗಳಿಗೆ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ 2 ಸ್ಥಾನದಲ್ಲಿದ್ದ ಹಾಲು ಮಹಾ ಮಂಡಳಗಳು ನಾಲ್ಕನೇ ಮತ್ತು ಐದನೇ ಸ್ಥಾನಕ್ಕೆ ಕುಸಿದಿವೆ ಎಂಬುದು ಅವರ ಆರೋಪವಾಗಿದೆ.
ನಿರ್ದೇಶಕ ಮಂಡಳಿಯಲ್ಲಿ ಬಹುತೇಕ ಸದಸ್ಯರು ಬಿಜೆಪಿಗೆ ಸೇರಿದವರೇ ಆಗಿದ್ದಾರೆ. ಆದರೂ ಒಕ್ಕೂಟದಲ್ಲಿ ಕೆಲ ಭಿನ್ನಾಭಿಪ್ರಾಯಗಳು ಕಂಡು ಬಂದಿರುವುದರಿಂದ ಎಂ.ಡಿ. ಹುದ್ದೆ ನೇಮಕ ಪ್ರಕ್ರಿಯೆ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು ಸಂಸ್ಥೆ ಅಧ್ಯಕ್ಷ ಸೋಮಶೇಖರ ರೆಡ್ಡಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ ವಹಿಸಲಾಗಿದೆ.