ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ ಸೆಸ್ ವಿಧಿಸುವುದರಿಂದ ಜನಸಾಮಾನ್ಯರ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. ಜನಸಾಮಾನ್ಯರ ಮೇಲೆ, ಬೆವರು ಸುರಿಸಿ ದುಡಿಯುವವರ ಮೇಲೆ ತೆರಿಗೆ ಹೇರುವ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೀಸೆಲ್ ಮತ್ತು ಪೆಟ್ರೋಲ್ ದರ ರಾಜ್ಯದಲ್ಲಿ ಈಗಾಗಲೇ ದುಬಾರಿಯಾಗಿದ್ದು, ಈಗ ಹೆಚ್ಚುವರಿ ಸೆಸ್ ವಿಧಿಸುವುದರಿಂದ ಜನರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ. ಅಲ್ಲದೆ, ಇದರಿಂದ ಸಾಗಾಣಿಕೆ ದರ ಹೆಚ್ಚಳವಾಗಿ ಅತ್ಯವಶ್ಯಕ ಬೆಲೆಯೂ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ನೆರೆ ಸಂತ್ರಸ್ತರಿಗೆ ಈಗಾಗಲೇ ರಾಜ್ಯದ ಜನತೆ ಉದಾರ ದೇಣಿಗೆ ನೀಡಿದ್ದಾರೆ. ಕಬ್ಬಿಣ ಅದಿರು ಸಾಗಣಿಕೆ ಮೇಲೆ 5 ಸಾವಿರ ರೂ. ತೆರಿಗೆ ವಿಧಿಸಿದರೂ ಯಾವ ತೊಂದರೆಯೂ ಇಲ್ಲ. ಆದರೆ ಮರಳು ಸಾಗಣಿಕೆಯ ಮೇಲೆ ತೆರಿಗೆ ವಿಧಿಸಲು ಉದ್ದೇಶಿಸಿರುವುದನ್ನು ಕೈ ಬಿಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಈ ನಡುವೆ ನೆರೆ ಸಂತ್ರಸ್ತರಿಗಾಗಿ ಈಗಾಗಲೇ ಸಂಗ್ರಹಿಸಲಾಗಿರುವ ಸಾರ್ವಜನಿಕರ ಹಣವನ್ನು ಸಮರ್ಪಕವಾಗಿ ಬಳಕೆಯಾಗುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವುದು ಅವಶ್ಯಕ ಎಂದು ತಿಳಿಸಿದ ಅವರು, ನೆರೆ ಸಂತ್ರಸ್ತರಿಗೆ ತಕ್ಷಣವೇ ಪರಿಹಾರ ಕಾಮಗಾರಿಗಳನ್ನು ಕೈಗೊಂಡು ಶಾಶ್ವತ ಕಾಮಗಾರಿ ರೂಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.