ಉತ್ತರ ಕರ್ನಾಟಕದಲ್ಲಿ ಪ್ರವಾಹದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಎಲ್ಲಾ ನೌಕರರು ದಿನಕ್ಕೆ ಎರಡು ಗಂಟೆ ಹೆಚ್ಚುವರಿಯಾಗಿ ಕೆಲಸಮಾಡಬೇಕು ಎಂದಿರುವುದು ಅವೈಜ್ಞಾನಿಕ ಎಂದು ಹೇಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಸರ್ಕಾರ ಯಾರನ್ನು ಕೇಳಿ ಈ ನಿರ್ಧಾರ ಕೈಗೊಂಡಿದೆ ಎಂದು ಪ್ರಶ್ನಿಸಿದ್ದಾರೆ, ಅಲ್ಲದೆ ಏಕಾಏಕಿ ಈ ನಿರ್ಧಾರ ಕೈಗೊಂಡು ತುಘಲಕ್ ನೀತಿ ಅನುಸರಿಸುತ್ತಿದೆ ಎಂದು ದೂರಿದ್ದಾರೆ.
ನೆರೆಪೀಡಿತ ಪ್ರದೇಶಗಳಲ್ಲಿ ಸರ್ಕಾರಿ ನೌಕರರು ಹೆಚ್ಚುವರಿ ಕೆಲಸ ಮಾಡಲಿ. ಆದರೆ ರಾಜ್ಯದ ಎಲ್ಲೆಡೆ ಎಲ್ಲರೂ ಹೆಚ್ಚುವರಿ ಕೆಲಸ ಮಾಡಬೇಕು ಎಂಬುದು ಅವೈಜ್ಞಾನಿಕ ಎಂದು ಹೇಳಿದ್ದಾರೆ.
ಸರ್ಕಾರದ ಪರಿಹಾರ ಜನರಿಗೆ ಸಿಕ್ಕಿಲ್ಲ ನೆರೆಪೀಡಿತರಿಗೆ ಇದುವರೆಗೂ ಸರ್ಕಾರದ ಪರಿಹಾರ ಸಾಮಗ್ರಿಗಳು ತಲುಪಿಲ್ಲ. ಅವರಿಗೇನಾದರೂ ನೆರವು ದೊರೆತಿದ್ದರೆ ಅದು ಸಂಘ-ಸಂಸ್ಥೆಗಳಿಂದ ಮಾತ್ರ ಎಂದು ಅವರು ಬೆಟ್ಟು ಮಾಡಿದರು.
ಸಂತ್ರಸ್ತರಿಗೆ ಪರಿಹಾರ ಕಾರ್ಯವನ್ನು ಸರ್ಕಾರ ತನ್ನ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ದೂರಿದರು. ಅವರು ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿ ಹೊತ್ತುಸಾಗಿದ ವಾಹನಗಳಿಗೆ ಹಸಿರು ನಿಶಾನೆ ತೋರಿದ ವೇಳೆ ಮಾತನಾಡುತ್ತಿದ್ದರು.
ಕಂಬಳಿ, ಆಹಾರ ಧಾನ್ಯ, ಬಟ್ಟೆ, ಹೊದಿಕೆ ಹೊತ್ತ ಮೂರು ಲಾರಿಗಳು ಹಾಗೂ ಎರಡು ಬಸ್‌ಗಳಿಗೆ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಚಾಲನೆ ನೀಡಿದರು.