ಪ್ರವಾಹ ಸಂತ್ರಸ್ತರಿಗೆ ಸರ್ಕಾರ ನೀಡುವ ಪರಿಹಾರವು ಜನರಿಗೆ ತಲುಪಿದೆಯೇ ಇಲ್ಲವೇ ಎಂಬದನ್ನು ಖಚಿತ ಪಡಿಸಿಕೊಳ್ಳಲು ಪಕ್ಷದ ಮುಖಂಡರು ಮುಂದಾಗಬೇಕು ಎಂದು ಕಾಂಗ್ರೆಸ್ ಸೂಚನೆ ನೀಡಿದೆ.
ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ಬುಧವಾರ ದಿನಪೂರ್ತಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದ್ದು, ಎಲ್ಲ ಶಾಸಕರು, ಮಾಜಿ ಶಾಸಕರು ಹಾಗೂ ಕಳೆದ ಚುನಾವಣೆಯಲ್ಲಿ ಸೋಲನ್ನಪ್ಪಿರುವ ಪಕ್ಷದ ಅಭ್ಯರ್ಥಿಗಳು ಪರಿಹಾರವು ಜನತೆಗೆ ತಲುಪಿದೆಯೇ ಇಲ್ಲವೇ ಎಂಬುದಾಗಿ ನಿಗಾ ಇರಿಸಿ ಪತ್ತೆ ಹಚ್ಚಬೇಕು ಎಂದು ಸೂಚನೆ ನೀಡಲಾಗಿದೆ.
ಕಾಂಗ್ರೆಸ್ ಜನಪ್ರತಿನಿಧಿಗಳೂ ಸಹ ಪ್ರವಾಹ ಪರಿಹಾರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು, ಜನರಿಗೆ ಪರಿಹಾರ ತಲುಪುವವರೆಗೂ ಕ್ಷೇತ್ರ ಬಿಡಬಾರದೆನ್ನುವ ಸಲಹೆ ನೀಡಲಾಗಿದೆ ಎಂದು ಪಕ್ಷದ ಮುಖಂಡರಾದ ದೇಶಪಾಂಡೆ ಹಾಗೂ ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ.