ಪ್ರವಾಹದಿಂದಾಗಿ ಮನೆಮಠಗಳನ್ನು ಕಳೆದುಕೊಂಡು ಬೀದಿಪಾಲಾಗಿರುವ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಲು ಮುಂದಾಗಿರುವ ಸರ್ಕಾರ ನಿರಾಶ್ರಿತರಿಗೆ ನೆರೆ ನಿರೋಧಕ ಮನೆಗಳನ್ನು ನಿರ್ಮಿಸಿಕೊಡಲು ಮುಂದಾಗಿದ್ದು, ಇದಕ್ಕಾಗಿ ಯೋಜನೆ ರೂಪಿಸುತ್ತಿದೆ.
ಪ್ರತೀ ಮನೆಯು 250 ಚದರ ಅಡಿ(30/50) ವಿಸ್ತೀರ್ಣ ಹೊಂದಿದ್ದು, ಒಂದು ಕೊಠಡಿ, ಅಡುಗೆ ಮನೆ, ಸ್ನಾನಗೃಹವನ್ನು ಹೊಂದಿರುತ್ತದೆ. ಮನೆಯ ಹಿಂದೆ ಶೌಚಾಲಯವಿದೆ. ಮುಂಭಾಗದಲ್ಲಿ ಜಗಲಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂತ್ರಸ್ತರಿಗೆ ನೀಡಲಾಗುವ ನಿವೇಶನದ ಉಳಿದ ಜಾಗದಲ್ಲಿ ರೈತರು ಜಾನುವಾರುಗಳನ್ನು ಕಟ್ಟಿಕೊಳ್ಳಬಹುದು ಎಂಬುದಾಗಿ ವಸತಿ ಇಲಾಖಾ ಕಾರ್ಯದರ್ಶಿ ಜಿ.ವಿ. ಕೊಂಗವಾಡ ತಿಳಿಸಿದ್ದಾರೆ.
ಸಂತ್ರಸ್ತರಿಗಾಗಿ ಎರಡು ಲಕ್ಷ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅರ್ಧದಷ್ಟು ಮನೆಗಳನ್ನು ಸರ್ಕಾರ ನಿರ್ಮಿಸಲು ಮಂದಾಗಿದ್ದರೆ, ಮಿಕ್ಕವುಗಳನ್ನು ಸಂಘ-ಸಂಸ್ಥೆಗಳು, ಮಠಮಂದಿರಗಳು ಹಾಗೂ ದಾನಿಗಳು ನಿರ್ಮಿಸಿ ಕೊಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಉದ್ದೇಶಿತ ಮನೆಗಳನ್ನು ಮೂರು ತಿಂಗಳಲ್ಲಿ ನಿರ್ಮಿಸಬಹುದಾಗಿದೆ ಎಂದೂ ಅವರು ಹೇಳಿದರು.
ಎರಡು ಲಕ್ಷ ಮನೆಗಳನ್ನು ನಿರ್ಮಿಸಲು 12,000 ಎಕರೆ ಜಮೀನಿನ ಅಗತ್ಯವಿದ್ದು, ಗುಲ್ಬರ್ಗ, ಬಳ್ಳಾರಿ, ಕೊಪ್ಪಳ, ರಾಯಚೂರು, ಬೆಳಗಾವಿ, ಗದಗ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಈಗಾಗಲೇ ಆರಂಭಿಸಿದೆ. ಇದಕ್ಕಾಗಿ ಪ್ರತಿ ಜಿಲ್ಲೆಗೆ ಎರಡು ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ಕೊಂಗವಾಡ ತಿಳಿಸಿದರು.