ಶ್ರೀರಾಮುಲು ಅಭಿಮಾನಿ ಬಳಗದ ವತಿಯಿಂದ ನಡೆಸಲಾಗಿದ್ದ ಸಾಮೂಹಿಕ ವಿವಾಹದಲ್ಲಿ 26 ಅಪ್ರಾಪ್ತ ವಯಸ್ಸಿನ ಜೋಡಿಗಳಿಗೆ ಮದುವೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಸಾಮೂಹಿಕ ವಿವಾಹದ ಹೆಸರು ನೊಂದಾಯಿಸಿದ 1,800 ಜೋಡಿಗಳಲ್ಲಿ ಶೇ. 40ರಷ್ಟು ಯುವತಿಯರಿಗೆ ವಯಸ್ಸಿನ ದೃಢೀಕರಣ ಪತ್ರವಿದೆ. ಇನ್ನು ಉಳಿದವರಿಗೆ ವೈದ್ಯಕೀಯ ಪ್ರಮಾಣ ಪತ್ರವಿಲ್ಲ. ಆದ್ದರಿಂದ ಅಪ್ರಾಪ್ತ ವಯಸ್ಸಿನ ಜೋಡಿಗಳಿಗೆ ವಿವಾಹವಾಗಿದೆ ಎಂಬ ಸಂದೇಹ ಉಂಟಾಗಿದೆ.
ಈ ನಡುವೆ ಇಲ್ಲಿ ವಿವಾಹವಾಗಿರುವ 26 ಮಂದಿಯ ವಿವಾಹ ನೋಂದಣಿ ಮಾಡಿಸದಂತೆ ಹಾಗೂ ಆದರ್ಶ ವಿವಾಹ ಯೊಜನೆಯಡಿ 10 ಸಾವಿರ ರೂ. ಪ್ರೋತ್ಸಾಹ ಧನ ವಿತರಿಸದಂತೆ ಮಕ್ಕಳ ಹಕ್ಕುಳಗಳ ಆಯೋಗದ ಅಧ್ಯಕ್ಷೆ ನೀನಾ ನಾಯಕ್ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.
ಇದೇವೇಳೆ ಈ ಅನುಮಾನಗಳಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ್, ಮಕ್ಕಳ ಹಕ್ಕುಗಳ ಆಯೋಗ ನೀಡಿರುವ ವರದಿಯಂತೆ ಗದಗ ಸಾಮೂಹಿಕ ವಿವಾಹದಲ್ಲಿ ಮದುವೆಯಾದ 26 ಯುವತಿಯರ ವೈದ್ಯಕೀಯ ಪರೀಕ್ಷೆಯನ್ನು ಇನ್ನೆರಡು ದಿನಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೆ, ವೈದ್ಯಕೀಯ ತಪಾಸಣೆಯಲ್ಲಿ ಮದುವೆಯಾಗಿರುವವರ ವಯಸ್ಸು 18ಕ್ಕಿಂತ ಕಡಿಮೆ ಎಂದು ದೃಢಪಟ್ಟಲ್ಲಿ ಅವರ ವಿವಾಹ ನೋಂದಣಿ ರದ್ದು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.