ಸರ್ಕಾರಿ ನೌಕರರು ಎರಡು ಗಂಟೆ ಹೆಚ್ಚುವರಿ ಕೆಲಸ ಮಾಡಬೇಕೆಂಬ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸರ್ಕಾರಿ ನೌಕರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸರ್ಕಾರದ ಈ ಉದ್ದೇಶವನ್ನು ತೀವ್ರವಾಗಿ ಖಂಡಿಸಿರುವ ಸರ್ಕಾರಿ ನೌಕರರು ಯಾವುದೇ ಕಾರಣಕ್ಕೂ ಹೆಚ್ಚುವರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಾನವೀಯತೆ ದೃಷ್ಟಿಯಿಂದ ಹಗಲಿರುಳೆನ್ನದೆ ಕೆಲಸ ಮಾಡಲು ಸಿದ್ಧರಿದ್ದೇವೆ. ಆದರೆ ಪ್ರವಾಹ ಇಲ್ಲದ ಅಥವಾ ಕೆಲಸದ ಒತ್ತಡವೂ ಇಲ್ಲದ ರಾಜ್ಯದ ವಿವಿಧ ಭಾಗಗಳಲ್ಲೂ ಹೆಚ್ಚುವರಿಯಾಗಿ ಕೆಲಸ ಮಾಡಿ ಎಂಬ ಸರ್ಕಾರದ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ನೌಕರರು ಹೇಳಿದ್ದಾರೆ.
ಸರ್ಕಾರದ ಈ ಪ್ರಸ್ತಾವನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಭೈರಪ್ಪ, ಈಗಾಗಲೇ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನೌಕರರು ಸಂಕಷ್ಟಕ್ಕೆ ಒಳಗಾದ ಜನರ ಪುನರ್ವಸತಿ ಕೆಲಸಗಳಲ್ಲಿ ತಲ್ಲೀನರಾಗಿದ್ದಾರೆ. ಸರ್ಕಾರಿ ನಿಗದಿ ಮಾಡಲು ಹೊರಟಿರುವ ಹೆಚ್ಚುವರಿ ಎರಡು ಗಂಟೆಗೂ ಅಧಿಕ ಸಮಯದವರೆಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು ಮೈಸೂರು ಸೇರಿದಂತೆ ಮತ್ತಿತರ ನಗರ ಪ್ರದೇಶಗಳ ಸರ್ಕಾರಿ ನೌಕರರು ಪರಸ್ಥಳಗಳಿಂದ ಬಂದು ಕೆಲಸ ಮಾಡಿ ಹೋಗುತ್ತಾರೆ. ಸರ್ಕಾರ ಬೆಳಿಗ್ಗೆ 9 ಗಂಟೆಗೇ ಕಚೇರಿ ಆರಂಭಿಸಿದರೆ ದೂರದ ಊರುಗಳಿಂದ ಬರುವುದು ಸಾಧ್ಯವೇ ಇಲ್ಲ. ಹೀಗಾಗಿ ಸರ್ಕಾರ ಈ ಪ್ರಸ್ತಾವನೆಯನ್ನು ಕೈ ಬಿಡಬೇಕು ಎನ್ನುವುದು ಅವರ ಒತ್ತಾಯವಾಗಿದೆ.