ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೊಬೈಲ್ ಮೂಲಕ ಟಿಕೆಟ್ ಕಾಯ್ದಿರಿಸುವ ಪದ್ಧತಿಯನ್ನು ಜಾರಿಗೆ ತರುವ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಹೊಸದೊಂದು ತಂತ್ರಜ್ಞಾನಕ್ಕೆ ಕರ್ನಾಟಕ ಪಾತ್ರವಾಗಿದೆ ಎಂದು ಸಾರಿಗೆ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಮೊಬೈಲ್ ಮೂಲಕ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಇದು ಅವತಾರ್ ಯೋಜನೆಯ ಮುಂದುವರಿದ ಭಾಗವಾಗಿದ್ದು, ಜಗತ್ತಿನ ಯಾವುದೇ ಮೂಲೆಯಿಂದ ಸಾಮಾನ್ಯ ಮೊಬೈಲ್‌ನಿಂದ ಎಸ್ಎಂಎಸ್ ಮಾಡಿ ಬಸ್ ಟಿಕೆಟ್ ಕಾಯ್ದಿರಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಐರಾವತ, ಅಂಬಾರಿ, ವೇಗದೂತ, ರಾಜಹಂಸ, ಶೀತಲ್ ಸೇರಿದಂತೆ ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ಮೊಬೈಲ್ ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಟಿಕೆಟ್ ಕಾಯ್ದಿರಿಸುವುದನ್ನು ಸರಳಗೊಳಿಸುವ ಉದ್ದೇಶದಿಂದ ಕೆಎಸ್ಆರ್ಟಿಸಿ ಮಾಹಿತಿ ತಂತ್ರಜ್ಞಾನದ ಉನ್ನತ ಮಟ್ಟದ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದು, ಹೊಸ ಮಾರುಕಟ್ಟೆ ಸೃಷ್ಟಿಸುವ ಹಾಗೂ ಸುಧಾರಿತ ಸಂಚಾರ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದರು.
ಅಲ್ಲದೆ, ಒಮ್ಮೆ ಕಾಯ್ದಿರಿಸಿದ ಟಿಕೆಟ್‌ಗಳನ್ನು ರದ್ದುಪಡಿಸುವ ವ್ಯವಸ್ಥೆಯೂ ಇಲ್ಲಿ ಲಭ್ಯವಿದೆ ಎಂದು ತಿಳಿಸಿದ ಅವರು, ಬುಕಿಂಗ್ ಪೂರ್ಣಗೊಂಡ ನಂತರ ಸಿಗುವ ಪಿಎನ್ಆರ್ ಸಂಖ್ಯೆ ಎಂಜೆಪೆ ತಂತ್ರಾಂಶದಲ್ಲಿ ದಾಖಲಾಗುತ್ತದೆ. ಈ ಟಿಕೆಟ್ ಮುದ್ರಿಸಿ ಪ್ರಯಾಣಿಕರ ಮೇಲ್ ವಿಳಾಸಕ್ಕೆ ರವಾನಿಸಲಾಗುವುದು ಎಂದು ಅವರು ವಿವರಣೆ ನೀಡಿದರು.