ದೀಪಾವಳಿಯನ್ನು ಯಾವುದೇ ಅದ್ದೂರಿ ಇಲ್ಲದೆ ಆಚರಿಸಲು ಕರೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನೆರೆ ಪೀಡಿತ ಸಂತ್ರಸ್ತರ ಜತೆ ಸರ್ಕಾರವಿದೆ ಎಂದು ಜನರಲ್ಲಿ ಧೈರ್ಯ ಮೂಡಿಸಲು ದೀಪಾವಳಿ ಹಬ್ಬವನ್ನು ಅತಿವೃಷ್ಟಿಯಿಂದ ಹಾನಿಗೊಳಗಾಗಿರುವವರ ಜೊತೆ ಆಚರಿಸಲು ತೀರ್ಮಾನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಳೆಯಿಂದ ನೆರೆ ಪೀಡಿತ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಾರಿ ದೀಪಾವಳಿಯನ್ನು ಸಂತ್ರಸ್ತರ ಜೊತೆಯೇ ಕಳೆಯಲು ನಿರ್ಧರಿಸಿದ್ದಾರೆ.
ನೆರೆಯಿಂದ ತಮ್ಮದೆಲ್ಲವನ್ನು ಕಳೆದುಕೊಂಡು ಜನತೆ ಕಷ್ಟದಲ್ಲಿರುವಾಗ ಅದ್ದೂರಿ ದೀಪಾವಳಿ ಬೇಡ ಎನ್ನುವ ತೀರ್ಮಾನಕ್ಕೆ ಬಂದಿರುವ ಮುಖ್ಯಮಂತ್ರಿಗಳು ಹಬ್ಬದ ಮೂರು ದಿನವೂ ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರ ನೋವನ್ನು ಆಲಿಸಿ ಅವರ ಜೊತೆಯಲ್ಲೇ ಇರಲಿದ್ದಾರಂತೆ.
ಅತಿವೃಷ್ಟಿ, ಆನಂತರದ ಪ್ರವಾಸದಿಂದ ದಣಿದಿದ್ದ ಮುಖ್ಯಮಂತ್ರಿಗಳು ಎರಡು ದಿನಗಳ ಕಾಲ ಜಿಂದಾಲ್ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದು ಇಂದಿನಿಂದ ತಮ್ಮ ಎಂದಿನ ಕಾರ್ಯಗಳತ್ತ ಗಮನ ಹರಿಸಲಿದ್ದು, ನಾಳೆಯಿಂದಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ.