ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಿಸುವಲ್ಲಿ ಸರ್ಕಾರವು ಭೇದಭಾವ ನೀತಿ ಅನುಸರಿಸುತ್ತಿದೆ ಎಂಬ ಕಾಂಗ್ರೆಸ್ ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಬಿಜೆಪಿ ವಕ್ತಾರ ಸಿ.ಟಿ. ರವಿ ಹೇಳಿದ್ದಾರೆ. ಸರ್ಕಾರವು ಪಕ್ಷ ಹಾಗೂ ಧರ್ಮದ ಆಧಾರದಲ್ಲಿ ತಾರತಮ್ಯ ಎಸಗುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ರವಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಧಾರ ರಹಿತವಾದ ಹೇಳಿಕೆಗಳನ್ನು ರಾಜಕೀಯ ದುರುದ್ದೇಶದಿಂದ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ತಾ ಕಳ್ಳ, ಪರರ ನಂಬ "ರಾಜ್ಯ ಸಚಿವರು ಕಳೆದ 16 ತಿಂಗಳಲ್ಲಿ ಗಳಿಸಿರುವ ಹಣವನ್ನು ವಿನಿಯೋಗಿಸಿದರೆ ನೆರೆಸಂತ್ರಸ್ತರಿಗೆ ಪೂರ್ಣಪ್ರಮಾಣದ ಪುನರ್ವಸತಿ ಕಲ್ಪಿಸಬಹುದು ಎಂಬುದಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ ಅವರು ವ್ಯಂಗ್ಯವಾಡಿರುವುದಕ್ಕೆ ತಿರುಗೇಟು ನೀಡಿದ ರವಿ, ರೇವಣ್ಣರವರು, ತಾ ಕಳ್ಳ; ಪರರ ನಂಬ ಎಂಬಂತಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.