ಕೇಂದ್ರ ಸರ್ಕಾರದ ಸಚಿವರಿಗೆ ಎಕಾನಮಿ ದರ್ಜೆಯಲ್ಲಿ ಪ್ರಯಾಣಿಸುವಂತೆ ಸಲಹೆ ಕೇಳಿಬಂದ ಬಳಿಕ ಈಗ ಕರ್ನಾಟಕದ ಸಚಿವರು ಮತ್ತು ಅಧಿಕಾರಿಗಳ ಸರದಿ ಬಂದಿದೆ.
ಪ್ರವಾಹ ಪರಿಹಾರ ಕಾರ್ಯಾಚರಣೆಗೆ ಹೆಚ್ಚುವರಿ ಸಂಪನ್ಮೂಲ ಎತ್ತುವ ಅಗತ್ಯದ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಶುಕ್ರವಾರ ಮಿತವ್ಯಯ ಕ್ರಮಗಳನ್ನು ಜಾರಿಗೆ ತಂದಿದ್ದು, ಸಚಿವರು ಮತ್ತು ಉನ್ನತಾಧಿಕಾರಿಗಳು ವಿಮಾನದಲ್ಲಿ ಎಕ್ಸಿಕ್ಯೂಟಿವ್ ದರ್ಜೆಯಲ್ಲಿ ಪ್ರಯಾಣಿಸದಂತೆ ಕಟ್ಟುನಿಟ್ಟಾಗಿ ಸರ್ಕಾರ ಆದೇಶ ನೀಡಿದೆ.
ಸರ್ಕಾರ ಜಾರಿಗೆ ತಂದ 8 ಅಂಶಗಳ ಮಿತವ್ಯಯ ನಿಯಮಗಳ ಬಗ್ಗೆ ಸುದ್ದಿಗಾರರಿಗೆ ವಿವರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು ಸೇರಿದಂತೆ ಎಲ್ಲ ಸಚಿವರು ಮತ್ತು ಉನ್ನತ ಆಡಳಿತಾಧಿಕಾರಿಗಳು ಎಕಾನಮಿ ದರ್ಜೆಯಲ್ಲಿ ಪ್ರಯಾಣಿಸಬೇಕೆಂದು ಮುಖ್ಯಮಂತ್ರಿ ಹೇಳಿದ್ದಾರೆ.ಎಲ್ಲ ರಾಜ್ಯ ಸಾರ್ವಜನಿಕ ವಲಯದ ಸಂಸ್ಥೆ ಅಧಿಕಾರಿಗಳು ಮತ್ತು ಸಚಿವರ ಸ್ಥಾನಮಾನ ಹೊಂದಿರುವ ಮಂಡಳಿ ಮತ್ತು ನಿಗಮಗಳ ಅಧ್ಯಕ್ಷರಿಗೂ ಅನ್ವಯಿಸುತ್ತದೆಂದು ಅವರು ಹೇಳಿದ್ದಾರೆ.
ಮಿತವ್ಯಯ ಕ್ರಮವಾಗಿ ಸರ್ಕಾರ ಹೊಸ ಹುದ್ದೆಗಳ ಸೃಷ್ಟಿ ಮತ್ತು ನೇಮಕಾತಿ ರದ್ದುಮಾಡಲಾಗಿದೆ. ವಿಶೇಷ ಪ್ರಕರಣಗಳಲ್ಲಿ ಮಾತ್ರ ನೇಮಕಾತಿಗೆ ಅವಕಾಶವಿದೆಯೆಂದು ಅವರು ಹೇಳಿದ್ದಾರೆ. ಮಿತವ್ಯಯ ಕ್ರಮವಾಗಿ, ಎಲ್ಲ ಸರ್ಕಾರಿ ಇಲಾಖೆಗಳು ಯೋಜನೇತರ ವೆಚ್ಚವನ್ನು ಶೇ.10ರಷ್ಟು ಕಡಿತಮಾಡಬೇಕು. ಸರ್ಕಾರವು ರಸ್ತೆಗಳು ಮತ್ತು ಸೇತುವೆಗಳ ಮರುನಿರ್ಮಾಣದ ಜತೆ ಪ್ರವಾಹ ಸಂತ್ರಸ್ತರ ಪುನರ್ವಸತಿಗೆ ಸಂಪನ್ಮೂಲ ಸಂಗ್ರಹಿಸಬೇಕಾದ್ದರಿಂದ ಯೋಜನೇತರ ವೆಚ್ಚಗಳಲ್ಲಿ ಕಡಿತ ಅವಶ್ಯಕವಾಗಿದ ಎಂದು ಮುಖ್ಯಮಂತ್ರಿ ವಿವರಿಸಿದ್ದಾರೆ.
ಮಿತವ್ಯಯ ಕ್ರಮವಾಗಿ ಅಧಿಕೃತ ಸಭೆಗಳನ್ನು, ಕಾರ್ಯಾಗಾರಗಳನ್ನು ಸ್ಟಾರ್ ಹೊಟೆಲ್‌ಗಳಲ್ಲಿ ನಡೆಸುವುದಕ್ಕೆ ಕೊಕ್ ಬಿದ್ದಿದೆ. ಸರ್ಕಾರದ ವೆಚ್ಚದಲ್ಲಿ ವಿದೇಶ ಯಾತ್ರೆ ರದ್ದುಮಾಡಬೇಕೆಂದೂ ಮಿತವ್ಯಯ ಕ್ರಮಗಳಲ್ಲಿ ಸೂಚಿಸಲಾಗಿದೆ.