ನೆರೆ ಸಂತ್ರಸ್ತರಿಗೆ ಪರಿಹಾರ ಸಂಗ್ರಹಿಸಲು ಚಿತ್ರತಾರೆಯರು ಬೀದಿಗಿಳಿದಿದ್ದಾರೆ. ಈ ಮೂಲಕ ಪ್ರವಾಹ ಸಂತ್ರಸ್ತರ ನೆರವಿಗೆ ದೇಣಿಗೆ ಸಂಗ್ರಹಿಸುವಲ್ಲಿ ಸರ್ಕಾರಕ್ಕೆ ನೆರವಾದರು.
ನಗರದ ಶ್ರೀಮಂತ ಬಡಾವಣೆ ಎಂದೇ ಗುರುತಿಸಿಕೊಂಡಿರುವ ಕೋರಮಂಗಲದ ಫೋರಂ ಮಾಲ್, ಬಿಗ್ ಬಜಾರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ| ಜಯಮಾಲಾ ನೇತೃತ್ವದಲ್ಲಿ ನಿಧಿ ಸಂಗ್ರಹ ಮಾಡಲಾಯಿತು.
ಫೋರಂ ಮಾಲ್ ಮುಂಭಾಗದಲ್ಲಿರುವ ವರನಟ ಡಾ| ರಾಜ್‌ಕುಮಾರ್ ಪುತ್ಥಳಿಗೆ ಹೂವಿನ ಹಾರ ಹಾಕುವ ಮೂಲಕ ಹಿರಿಯ ನಟ ಅಂಬರೀಷ್ ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿದರು. ಪರಿಹಾರ ನಿಧಿಗೆ ಉದಾರ ಸಹಾಯ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನೆರೆ ಸಂತ್ರಸ್ತರ ನೆರವಿಗೆ ಸರ್ಕಾರ ಈಗಾಗಲೇ ಸಾಕಷ್ಟು ಹಣ ಬಿಡುಗಡೆ ಮಾಡಿದೆ. ದೇಣಿಗೆಯನ್ನೂ ಸಂಗ್ರಹಿಸಿದೆ. ಈ ಮಧ್ಯೆ ಅಳಿಲು ಸೇವೆ ಎಂಬಂತೆ ಚಿತ್ರೋದ್ಯಮ ನಿಧಿ ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಿದೆ ಎಂದು ಡಾ| ಜಯಮಾಲಾ ತಿಳಿಸಿದರು.
ಈ ಪರಿಹಾರ ನಿಧಿ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ದರ್ಶನ್, ದೊಡ್ಡಣ್ಣ, ಪ್ರಜ್ವಲ್ ದೇವರಾಜ್, ರಮ್ಯ, ಸುಧಾರಾಣಿ, ಯೋಗರಾಜ್ ಭಟ್, ಅನುಪ್ರಭಾಕರ್, ಐಂದ್ರಿತಾ ರೇ, ಸೇರಿದಂತೆ ಹಲವು ಕಲಾವಿದರು ಒಟ್ಟಾಗಿ ಭಾಗವಹಿಸುವ ಮೂಲಕ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಿದರು.
ಫೋಟೋ ಬೇಕೆ ದೇಣಿಗೆ ನೀಡಿ
ಇದು ನಟಿ ರಮ್ಯ ಮಾತು, ತಮ್ಮ ಜೊತೆಗೆ ಫೋಟೋ ತೆಗೆಸಿಕೊಳ್ಳುವುದಕ್ಕೆ ಇಚ್ಛಿಸುವವರು ಧಾರಾಳವಾಗಿ ಧನ ಸಹಾಯ ಮಾಡಿ ಎಂದು ಕರೆ ನೀಡುವ ಪರಿಹಾರ ಧನ ಸಂಗ್ರಹಿಸಿದರು.