ಪ್ರವಾಹ ಪೀಡಿತ ಜಿಲ್ಲೆಗಳ ರೈತರ ಸಾಲ ಮನ್ನಾ ಮಾಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸರ್ಕಾರವನ್ನು ಆಗ್ರಹಿಸಿದ ಬೆನ್ನಲ್ಲೆ, ಇದೀಗ ಈ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ನೆರೆ ಸಂತ್ರಸ್ತ ರೈತರ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸಿದೆ.
ಈ ಸಂಬಂಧ ಪ್ರಧಾನಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನದಿ ತಟಗಳಲ್ಲಿರುವ ಗ್ರಾಮಗಳ ಶಾಶ್ವತ ಸ್ಥಳಾಂತರ ಮತ್ತು ಶಾಶ್ವತ ವಸತಿ ಸೌಲಭ್ಯ ಕಲ್ಪಿಸಿಕೊಡಲು ಅನುವಾಗುವಂತೆ 2 ಸಾವಿರ ಕೋಟಿ ರೂಪಾಯಿಗಳ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಮುಖ್ಯಮಂತ್ರಿಗಳು, ಕಳೆದ ಹಲವು ತಿಂಗಳು ಮಳೆ ಇಲ್ಲದೇ ಬೆಳೆ ಕಳೆದುಕೊಂಡ ಈ ಭಾಗದ ರೈತರು ಇದೀಗ ಪ್ರವಾಹದಿಂದ ಬೆಳೆದು ನಿಂತಿದ್ದ ಬೆಳೆಯನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ವಿವಿಧ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಮಾಡಿರುವ ಕೃಷಿ ಸಾಲವನ್ನು ಮರುಪಾವತಿಸುವ ಸ್ಥಿತಿಯಲ್ಲಿ ರೈತರಿಲ್ಲ. ಅಲ್ಲದೇ, ಈಗಿರುವ ಸಾಲವನ್ನು ದೀರ್ಘಾವಧಿಗೆ ವಿಸ್ತರಿಸಿದರೂ ಅವರಿಗೆ ಸಹಕಾರಿಯಾಗುವುದಿಲ್ಲ ಎಂದು ಪ್ರಧಾನಿಗೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ.
ರೈತರ ಇಂತಹ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಮಾನವೀಯತೆ ದೃಷ್ಟಿಯಿಂದ ಸಾಲಮನ್ನಾ ಮಾಡುವ ನಿರ್ಧಾರ ಘೋಷಿಸಬೇಕೆಂದು ಪ್ರಧಾನಿಗೆ ಪತ್ರದಲ್ಲಿ ಮನವಿ ಮಾಡಿರುವುದಾಗಿ ಅವರು ತಿಳಿಸಿದರು.
ಅಲ್ಲದೆ, ಪ್ರಸ್ತುತ ಮಳೆ ಆಧಾರಿತ ಭೂಮಿಯಲ್ಲಿ ನಷ್ಟವಾದ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 2ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ಆದರೆ ಇದು ರೈತ ಕಳೆದುಕೊಂಡ ಬೆಳೆಗೆ ಪರಿಹಾರ ಸಿಕ್ಕಂತಾಗುವುದಿಲ್ಲ. ಹೀಗಾಗಿ ಪರಿಹಾರದ ಹಣವನ್ನು 5 ಸಾವಿರ ರೂ.ಗೆ ಏರಿಸಬೇಕೆಂದು ಮನವಿ ಮಾಡಿರುವುದಾಗಿ ಅವರು ಹೇಳಿದ್ದಾರೆ.