ಇದೇ ತಿಂಗಳ 20ರಂದು ದೆಹಲಿಗೆ ತೆರಳಿರುವ ಸರ್ವಪಕ್ಷ ನಿಯೋಗಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಅಪಸ್ವರ ಎತ್ತಿದ ಬೆನ್ನಲ್ಲೆ ಕಾಂಗ್ರೆಸ್ ಕೂಡ ನಿಯೋಗದ ಕುರಿತು ಆಕ್ಷೇಪ ವ್ಯಕ್ತಪಡಿಸಿದೆ. ಆದರೆ ಈ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿಯೇ ಭಿನ್ನವಾದ ಹೇಳಿಕೆಗಳು ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಈಗಾಗಲೇ ನೆರೆ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಲು ರಾಜ್ಯಕ್ಕೆ ಕೇಂದ್ರ ನಾಯಕರು ಆಗಮಿಸಿದ್ದು, ಪರಿಸ್ಥಿತಿಯ ಅವಲೋಕನ ಮಾಡಿದ್ದಾರೆ. ಅಲ್ಲದೆ, ಒಂದು ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಈ ಸಧ್ಯದ ಪರಿಸ್ಥಿತಿಯಲ್ಲಿ ಸರ್ವಪಕ್ಷ ನಿಯೋಗ ಕೇಂದ್ರಕ್ಕೆ ತೆರಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಮೊದಲು ಬಿಡುಗಡೆ ಮಾಡಿರುವ ಹಣವನ್ನು ಹೇಗೆ ಬಳಸಿಕೊಳ್ಳಬೇಕೆಂಬ ಬಗ್ಗೆ ಚರ್ಚೆಯಾಗಲಿ. ಆ ಬಳಿಕ ಮುಂದಿನ ಪರಿಹಾರದ ಬಗ್ಗೆ ತೀರ್ಮಾನ ಮಾಡುವುದು ಒಳಿತು. ಈಗಷ್ಟೇ ಕೇಂದ್ರದಿಂದ ಹಣ ಪಡೆದಿರುವ ರಾಜ್ಯ ಸರ್ಕಾರ, ಮತ್ತೊಮ್ಮೆ ದೆಹಲಿಗೆ ತೆರಳಿ ಹಣ ಬಿಡುಗಡೆ ಮಾಡುವಂತೆ ಕೋರುವುದು ಎಷ್ಟು ಸರಿ ಎಂದವರು ಪ್ರಶ್ನಿಸಿದ್ದಾರೆ.
ಆದರೆ ಸರ್ವಪಕ್ಷ ನಿಯೋಗದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ರೈಲ್ವೆ ಸಚಿವ ಕೆ.ಎಚ್. ಮುನಿಯಪ್ಪ, ನೆರೆ ಹಾವಳಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕದವರ ನೆರವಿಗೆ ಸಹಾಯ ಹಸ್ತ ನೀಡುವಂತೆ ಕೇಂದ್ರಕ್ಕೆ ತೆರಳಲಿರುವ ಸರ್ವಪಕ್ಷ ನಿಯೋಗಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಕಾಂಗ್ರೆಸ್ ಸಿದ್ಧವಿದೆ ಎಂದವರು ಹೇಳಿದ್ದಾರೆ.