ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಇಸ್ಕಾನ್‌ ಬ್ಲಾಕ್‌ಮೇಲ್ ಮಾಡುತ್ತಿದೆ: ಡಿಕೆಶಿ ಕೆಂಡಾಮಂಡಲ (Iskcon | DK Shivkumar | Sonia Gandhi | Congress)
Feedback Print Bookmark and Share
 
ಶಾಲಾ ಮಕ್ಕಳಿಗೆ ಬಿಸಿಯೂಟ ನೀಡುವ ನೆಪದಲ್ಲಿ ಇಸ್ಕಾನ್ ನಡೆಸುತ್ತಿರುವ ಅಕ್ರಮಗಳನ್ನು ಬಹಿರಂಗಪಡಿಸಿರುವುದಕ್ಕಾಗಿ ಸದರಿ ಸಂಸ್ಥೆಯು ವ್ಯವಸ್ಥಿತ ರೀತಿಯಲ್ಲಿ ಬ್ಲಾಕ್‌ಮೇಲ್ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಬಡಮಕ್ಕಳ ಹೆಸರಿನಲ್ಲಿ ಸಂಗ್ರಹಿಸಲಾಗಿರುವ ಕಾಳಸಂತೆಯಲ್ಲಿ ಮಾರಾಟ ಮಾಡುವ ಹೀನಮಟ್ಟಕ್ಕೆ ಇಸ್ಕಾನ್ ಇಳಿದಿರುವುದನ್ನು ತಾವು ಬಹಿರಂಗಪಡಿಸಿರುವುದಕ್ಕಾಗಿ ತಮ್ಮನ್ನು ಪಕ್ಷದ ಕಾರ್ಯಾಧ್ಯಕ್ಷ ಸ್ಥಾನದಿಂದ ಇಳಿಸುವ ಬಗ್ಗೆ ಇಸ್ಕಾನ್ ವ್ಯವಸ್ಥಿತ ಹುನ್ನಾರ ನಡೆಸಿದೆ. ಇದಕ್ಕಾಗಿ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರ ಮೂಲಕ ಸೋನಿಯಾ ಗಾಂಧಿಯವರ ಸಂಪರ್ಕ ಬೆಳೆಸಿ ತಮ್ಮ ಪದಚ್ಯುತಿ ಮಾಡಿಸುವ ಕುರಿತು ದೂರವಾಣಿಯಲ್ಲಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ತಿಳಿಸಿದರು.

ಸಂಗ್ರಹಿಸಲಾದ ಅಕ್ಕಿಯನ್ನು ತಮ್ಮದೇ ಆದ ಗೋದಾಮಿನಲ್ಲಿ ಇಸ್ಕಾನ್ ಸಂಸ್ಥೆ ಶೇಖರಿಸಿಡಬಹುದಿತ್ತು. ಅದರ ಬದಲು ರಾಜರಾಜೇಶ್ವರಿ ನಗರದ ಕಲ್ಯಾಣಮಂಟಪದಲ್ಲಿ ಇಡುವ ಅಗತ್ಯವೇನಿತ್ತು? ಅಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖಾಧಿಕಾರಿಗಳು ವಶಪಡಿಸಿಕೊಂಡಿರುವ ಅಕ್ಕಿಯಾವುದು ಎಂದು ಡಿಕೆಶಿ ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.

ಇಸ್ಕಾನ್ ಸಂಸ್ಥೆಯ ಮಧುಪಂಡಿತ ದಾಸ್ ಹಾಗೂ ಅವರ ಶಿಷ್ಯರು ಅಕ್ಕಿಯ ಕಾಳಸಂತೆ ನಡೆಸುತ್ತಿದ್ದಾರೆ. ಇದರ ಕುರಿತು ಹಾಗೂ ತಮ್ಮ ವಿರುದ್ಧದ ವ್ಯವಸ್ಥಿತ ಬ್ಲಾಕ್‌ಮೇಲ್ ಕುರಿತು ಸೂಕ್ತ ಸಮಯದಲ್ಲಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು ಎಂದು ಡಿಕೆಶಿ ಇದೇ ಸಂದರ್ಭದಲ್ಲಿ ಪುನರುಚ್ಚರಿಸಿದರು.

ತನ್ನ ವಿರುದ್ಧ ಮಧುಪಂಡಿತ ದಾಸ್ ಮತ್ತು ಅವರ ಹಿಂಬಾಲಕರು ಅನುಚಿತ ಆರೋಪಗಳನ್ನು ಮಾಡುತ್ತಿದ್ದಾರೆ. ಇಸ್ಕಾನ್ ಅಕ್ರಮಗಳನ್ನು ಬಯಲಿಗೆಳೆದ ಕಾರಣಕ್ಕಾಗಿ ನನ್ನ ಕಾರ್ಯಾಧ್ಯಕ್ಷ ಸ್ಥಾನ ಹೋದರೂ ಚಿಂತೆಯಿಲ್ಲ. ಇಸ್ಕಾನ್ ವಿರುದ್ಧದ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಡಿಕೆಶಿ ಶಪಥ ಮಾಡಿದರು.

ಹೈಕಮಾಂಡ್‌ನಲ್ಲಿ ನನ್ನ ವಿರುದ್ಧ ಪಿತೂರಿಯ ಮೂಲಕ ಕೆಟ್ಟ ಭಾವನೆ ಬರುವಂತೆ ಮಾಡುವ ಯತ್ನಗಳು ನಡೆಯುತ್ತಿವೆ. ಇದರಲ್ಲಿ ಇಸ್ಕಾನ್‌ಗೆ ಯಶಸ್ಸು ಸಿಗುವುದಿಲ್ಲ. ನನ್ನ ಹೋರಾಟ ಯಥಾ ಪ್ರಕಾರ ಮುಂದುವರಿಯುತ್ತದೆ. ಯಾರ ಬ್ಲಾಕ್‌ಮೇಲ್‌ಗೂ ನಾನು ಮಣಿಯಲಾರೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ