ಚಿಕ್ಕಮಗಳೂರು, ಭಾನುವಾರ, 18 ಅಕ್ಟೋಬರ್ 2009( 11:13 IST )
ಜಿಲ್ಲೆಯ ಕಸಬಾ ಹೋಬಳಿಯ ಬಿಂಡಿಗ ಗ್ರಾಮದಲ್ಲಿ ನಡೆಯುತ್ತಿರುವ ದೇವೀರಮ್ಮ ದೀಪೋತ್ಸವ ಹಾಗೂ ಜಾತ್ರೆಯಲ್ಲಿ ಭಕ್ತರು ಉತ್ಸಾಹ-ಸಂಭ್ರಮಗಳಿಂದ ಪಾಲ್ಗೊಂಡಿದ್ದು ದೀಪಾವಳಿಯ ಸಂತಸದ ಜೊತೆಜೊತೆಗೇ ಅದು ಇಡೀ ಗ್ರಾಮದಲ್ಲಿ ಭಕ್ತಿಯ ಪರಾಕಾಷ್ಠತೆಯ ವಾತಾವರಣವನ್ನು ನಿರ್ಮಿಸಿದೆ ಎಂದು ಮೂಲಗಳು ತಿಳಿಸಿವೆ.
ಕೇವಲ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾತ್ರವೇ, ಅದೂ ಮೂರು ದಿನಗಳವರೆಗೆ ಮಾತ್ರ ದೇವಿರಮ್ಮ ದೇಗುಲದ ಬಾಗಿಲು ತೆರೆದು ದರ್ಶನಕ್ಕೆ ಅವಕಾಶ ಕಲ್ಪಿಸುವುದರಿಂದಾಗಿ, ಈ ವಿಶೇಷ ದರ್ಶನವನ್ನು ಪಡೆದುಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಭಕ್ತರು ಮುಗಿಬಿದ್ದರು. ಬೆಟ್ಟ ಹತ್ತಲು ರಾತ್ರಿಯಿಂದಲೇ ನೂಕುನುಗ್ಗಲು ಶುರುವಾಗಿತ್ತು ಎಂದು ತಿಳಿದುಬಂದಿದೆ.
ರಾಜ್ಯದ ವಿವಿಧೆಡೆಗಳಿಂದ, ಅದರಲ್ಲೂ ವಿಶೇಷವಾಗಿ ಬೆಂಗಳೂರು, ತುಮಕೂರು, ಶಿವಮೊಗ್ಗಾ, ಮೈಸೂರು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಅವರ ಅನುಕೂಲಕ್ಕಾಗಿ ಕಡೂರು, ಬೀರೂರು ಹಾಗೂ ತರೀಕೆರೆ ರೈಲ್ವೆ ನಿಲ್ದಾಣಗಳಿಂದ ಬೆಟ್ಟಕ್ಕೆ ತೆರಳಲೆಂದೇ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ದೇವಿರಮ್ಮ ಬೆಟ್ಟದಲ್ಲಿ ಪೂಜೆ ಸಲ್ಲಿಸಲೆಂದು ಬರುವ ಭಕ್ತಾದಿಗಳು ಬೆಟ್ಟದಲ್ಲಿ ತೆಂಗಿನಕಾಯಿ ಒಡೆಯುವುದು, ಚಪ್ಪಲಿ ಧರಿಸಿ ನಡೆಯುವುದು ಹಾಗೂ ಪ್ಲಾಸ್ಟಿಕ್ ಚೀಲಗಳನ್ನು ಬಳಸುವಂತಿಲ್ಲ ಎಂದು ಜಿಲ್ಲಾಡಳಿತವು ಈ ಬಾರಿ ಆದೇಶಿಸಿದ್ದು ವಿಶೇಷವಾಗಿತ್ತು. ಇಷ್ಟಿದ್ದರೂ ನೂಕುನುಗ್ಗಲಿನಲ್ಲೂ ರಾತ್ರಿಯಿಂದಲೇ ಬೆಟ್ಟ ಹತ್ತಿಳಿಯುತ್ತಿದ್ದ ಅಬಾಲವೃದ್ಧರನ್ನೊಳಗೊಂಡ ಭಕ್ತವೃಂದವನ್ನು ನಿಯಂತ್ರಿಸುವುದು ಆರಕ್ಷಕ ಇಲಾಖೆಗೆ ಈ ಬಾರಿ ಸವಾಲಾಗಿ ಪರಿಣಮಿಸಿತ್ತು ಎಂದು ಸುದ್ದಿಮೂಲಗಳು ತಿಳಿಸಿವೆ.